ಪೌರತ್ವ ಕಾಯ್ದೆ ವಿರೋಧಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ

ಲೋಕದರ್ಶನ ವರದಿ

ಕೊಪ್ಪಳ ಡಿ.21: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಕೊಪ್ಪಳ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಮುಸ್ಲಿಂ ಮತ್ತು ದಲಿತ ಸಂಘಟನೆ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ರದ್ಧುಗೊಳಿಸುವಂತೆ ಒತ್ತಾಯಿಸಿದರು.

ಈಗಾಗಲೇ ರಾಜ್ಯ ಮತ್ತು ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರಕಾರ 144 ಕಲಂ ಜಾರಿಗೊಳಿಸಿ ನಿಷೇಧಾಜ್ಞೆ ಮಾಡಲಾಗಿದ್ದು, ಪ್ರತಿಭಟನೆ, ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಅದರ ಬದಲಾಗಿ ಇಲ್ಲಿನ ಈದ್ಗಾ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿ ಪೌರತ್ವ ಕಾಯ್ದೆಗೆ ವಿರೋಧಿಸಿ ನಂತರ ಅದೇ ಸ್ಥಳದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ದೇಶದ ಪೌರತ್ವ ನೀಡುವಲ್ಲಿ ಧಾಮರ್ಿಕ ಆಧಾರದಲ್ಲಿ ತಾರತಮ್ಯ ನಮ್ಮ ಸಂವಿಧಾನದ ಪರಿಚ್ಛೇದ 14 ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಕೇಂದ್ರ ಸರಕಾರ ಮಾಡಿದೆ, ಕೋಮು ಧೃವೀಕರಣ ಮತ್ತು ಮುಸ್ಲಿಂರನ್ನು ಟಾಗರ್ೆಟ್ ಮಾಡಿ ಬಲಿಪಶು ಮಾಡುವ ಕುತಂತ್ರ ರಾಜಕೀಯ ಕೇಂದ್ರ ಸರಕಾರದ ಹಿಡನ್ ಅಜಂಡವಾಗಿದೆ ಎಂದು ಆರೋಪಿಸಿದರು. ದೇಶದ ಗಂಭೀರ ಆಥರ್ಿಕ ಪರಸ್ಥಿತಿ ಮತ್ತು ಸಾಮಾನ್ಯ ಜನತೆ ಅನುಭವಿಸುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೇಳೆಯುವ ಕುತಂತ್ರ ಇದಾಗಿದೆ. ಸದರಿ ಪೌರತ್ವ ಕಾನೂನನ್ನು ಬಲವಾಗಿ ವಿರೋಧಿಸುತ್ತೇವೆ. ನಮ್ಮ ದೇಶದ ಸಂವಿಧಾನದ ಉಳಿವಿಗಾಗಿ ಪ್ರತಿಯೊಬ್ಬರು ಹೋರಾಡುತ್ತೇವೆ. ಕೂಡಲೇ ಕೇಂದ್ರ ಸರಕಾರ ಪೌರತ್ವ ಕಾಯ್ದೆ ಸಿಎಎ ಮತ್ತು ಎನ್ಆರ್ಸಿ ರದ್ಧುಗೊಳಿಸಬೇಕೆಂದು ಪ್ರತಿಭಟನೆಯ ಮೂಲಕ ಒತ್ತಾಯಿಸಿದರು.

ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ರಾಜ್ಯ ಸಭಾ ಸದಸ್ಯ ಬಳ್ಳಾರಿಯ ಡಾ. ಸಯ್ಯದ್ ನಾಸೀರ್ ಹುಸೇನ್ ಅವರು ಮಾತನಾಡಿ, ಕೇಂದ್ರದಲ್ಲಿ ಅನೈತಿಕ ಸರಕಾರ ಬಂದಿದೆ. ಅವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಹೀಗಾಗಿ ಸಂವಿಧಾನದ ವಿರುದ್ಧ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ನಾವೆಲ್ಲರೂ ತಿರಸ್ಕರಿಸುತ್ತೇವೆ. ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಳು ಮಾಡುವ ಕೋಮುವಾದಿಗಳ ದುರುದ್ದೇಶ ಸಫಲಗೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. 

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಧುರಾಡಳಿತದ ವಿರುದ್ಧ ನಿರಂತರ ಹೋರಾಟ ನಡೆಯಲಿದೆ ಎಂದರು. ಹಿರಿಯ ನ್ಯಾಯವಾದಿ ಎಸ್.ಆಸೀಫ್ ಅಲಿ ಮಾತನಾಡಿ, ಪೌರತ್ವ ಕಾಯ್ದೆ ರದ್ಧತಿಗೆ ಒತ್ತಾಯಿಸಿದರು. ಬಂಡಾಯ ಸಾಹಿತಿ ಪ್ರೋ.ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಅತ್ಯಂತ ಕೆಟ್ಟ ಸರಕಾರ ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದ ಜನರ ದುರದೃಷ್ಠಕರವಾಗಿದೆ ಎಂದರು. ಹೋರಾಟಗಾರ ರಜಾಕ್ ಉಸ್ತ್ರಾದ್ ಮಾತನಾಡಿ, ಸಂವಿಧಾನದ ಉಳಿವಿಗಾಗಿ ನಿರಂತರ ಹೋರಾಟಕ್ಕೆ ಕರೆ ನೀಡಿದರು. 

ಮುಸ್ಲಿಂ ಧರ್ಮಗುರು ಮುಫ್ತಿ ಮೌಲಾನಾ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿರವರು ಮಾತನಾಡಿ. ಸಂವಿಧಾನ ಮೊದಲು ಸಂಸತ್ ನಂತರ ಎಂದು ಹೇಳಿದರು. ಹೈ-ಕ. ರಕ್ಷಣಾ ವೇದಿಕೆಯ ಸಂಗಮೇಶ ಬಾದವಾಡಗಿ, ಹೋರಾಟಗಾರ ಡಿ.ಎಚ್.ಪೂಜಾರ, ದಲಿತ ಮುಖಂಡ ಯಲ್ಲಪ್ಪ ಬಳಗಾನೂರು ಮತ್ತಿತರರು ಮಾತನಾಡಿ, ಕೋಮುವಾದಿಗಳ ವಿರುದ್ಧ ಹೋರಾಟಕ್ಕೆ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳು ಮುಂದಾಗಬೇಕೆಂದರು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆಗಳು, ಮುಸ್ಲಿಂ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸಮಾಜದ ಮುಖಂಡ ಅಮ್ಜದ್ ಪಟೇಲ್ ಸೇರಿದಂತೆ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಸುರೇಶ ಭೂಮರೆಡ್ಡಿ, ಮೊಹ್ಮದ್ ಅಲಿ ಹಿಮಾಯತಿ, ಭರಮಪ್ಪ ಬೆಲ್ಲದ್, ಕೆ.ಬಾಲಚಂದ್ರನ್, ಅಂಜುಮನ್ ಕಮೀಟಿಯ ಪೀರಾಹುಸೇನ್ ಚಿಕನ್, ಟಿಪ್ಪು ಸುಲ್ತಾನ ಕಮೀಟಿಯ ಜೀಲಾನ್ ಮೈಲೈಕ್, ಮಾನ್ವಿ ಪಾಷಾ, ಎಂ.ಪಾಷಾ ಕಾಟನ್, ಜಾಕೀರ್ ಕಿಲ್ಲೆದಾರ, ಖಾಜಾವಲಿ ಬನ್ನಿಕೊಪ್ಪ, ಮೆಹಮೂದ್ ಹುಸೇನಿ ಬಲ್ಲೆ ಮತ್ತು ಯುವ ನಾಯಕ ಸಲೀಂ ಮಡಲಗೇರಿ, ಮೊಹ್ಮದ ಮುಸ್ತಫಾ ಕಮಾಲ್ ಪಾಷಾ ಖಾದ್ರಿ, ಸಯ್ಯದ್ ಜುಲ್ಲು ಖಾದರ್ ಖಾದ್ರಿ, ಎಂ.ಎ.ಶುಕುರ್ ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿ ಒಟ್ಟಾರೆ ಕೊಪ್ಪಳದಲ್ಲಿ ಶಾಂತಿಯುತ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಈದ್ಗಾ ಮೈದಾನದಲ್ಲಿ ಜರುಗಿತು.