ಪದವೀಧರ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಸಾಧ್ಯತೆ: ಪ್ರೊ. ಸಂಕನೂರ

ಲೋಕದರ್ಶನ ವರದಿ

ಗದಗ 09: ಪಶ್ಚಿಮ ಪದವೀಧರ ಮತಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಲು ಭಾರತೀಯ ಜನತಾ ಪಾರ್ಟ  ವರಿಷ್ಠರು ತಮಗೆ ಅವಕಾಶ ನೀಡುವರೆಂಬ ಆತ್ಮವಿಶ್ವಾಸವಿದ್ದು, ನಾನು ಪುನಃ ಸ್ಪರ್ಧೆಸುತ್ತೇನೆ. ತಾವು ನನ್ನನ್ನು ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರೊ.ಎಸ್.ವಿ. ಸಂಕನೂರ ಮನವಿ ಮಾಡಿದರು.

ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಪದವೀಧರ ಮತದಾರರನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಕಳೆದ ಐದು ವರ್ಷ ಏಳು ತಿಂಗಳ ಅವಧಿಯಲ್ಲಿ ನಾನು ವಿಧಾನ ಪರಿಷತ್ನ ಒಳಗೆ ಮತ್ತು ಹೊರಗೆ ಪದವೀಧರ, ಶಿಕ್ಷಕರ ಹಾಗೂ ನಿರುದ್ಯೋಗಿ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ಮಾಡಿದ ತೃಪ್ತಿ ನನಗಿದೆ. ಇದಲ್ಲದೇ, ಪಕ್ಷದ ವರಿಷ್ಠರು ಸೂಚಿಸಿದ ಸಂಘಟನಾತ್ಮಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕ್ರೀಯಾಶೀಲವಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನನಗೆ ಪಕ್ಷ ಮತ್ತೊಂದು ಬಾರಿ ಅವಕಾಶ ನೀಡುವ ದೃಢವಾದ ನಂಬಿಕೆಯನ್ನು ಹೊಂದಿರುವುದಾಗಿ ಅವರು ಹೇಳಿದರು.  

ಕಳೆದ ಐದು ವರ್ಷಗಳಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಗದಗ, ಧಾರವಾಡ, ಹಾವೇರಿ ಹಾಗೂ ಕಾರವಾರ ನಾಲ್ಕೂ ಜಿಲ್ಲೆಗಳಲ್ಲಿ ಪದವೀಧರರಿಗೆ ಉದ್ಯೋಗ ಕಲ್ಪಿಸುವಲ್ಲಿ ನೆರವಾಗಲು ಉದ್ಯೋಗ ಮೇಳಗಳನ್ನು ಮಾಡಿ ಸಾವಿರಾರು ಪದವೀಧರರಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಇಲಾಖೆಗಳಲ್ಲಿ ಕಳೆದ ಎಂಟು-ಒಂಬತ್ತು ವರ್ಷಗಳಿಂದ ನಿವೃತ್ತಿ ಹಾಗೂ ನಿಧನ, ರಾಜೀನಾಮೆಯಿಂದ ತೆರವಾದ ಹುದ್ದೆಗಳನ್ನು ತುಂಬಲು ಅವಕಾಶವಿರಲಿಲ್ಲ. ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾದ ಎಲ್ಲ ಸದಸ್ಯರು ಪಕ್ಷಾತೀತವಾಗಿ ವಿಧಾನಸೌಧ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಹುದ್ದೆಗಳನ್ನು ತುಂಬಲು ಅವಕಾಶ ಕೊಡಿಸಲಾಗಿದೆ ಎಂದರು.

ಇದೂ ಅಲ್ಲದೇ ರಾಜ್ಯದ 36 ಇಲಾಖೆಗಳಲ್ಲಿ ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳನ್ನು ತುಂಬಲು ತಮ್ಮ ಅವಧಿಯಲ್ಲಿ ಸಾಕಷ್ಟು ಬಾರಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನೇಮಕಾತಿ ಆಗುವಲ್ಲಿ ಯಶಸ್ಸನ್ನು ಹೊಂದಿದ್ದೇನೆ. ಅದ್ದರಿಂದ ಇದೇ ಮೇ ಜೂನ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾಣೆಯಲ್ಲಿ ತಮ್ಮನ್ನು ಬೆಂಬಲಿಸಿ ಆಯ್ಕೆ ಮಾಡುವಂತೆ ಪದವೀಧರ ಮತದಾರರಲ್ಲಿ ಅವರು ಮನವಿ ಮಾಡಿದರು.

ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಧಾರವಾಡ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆಗಳಲ್ಲಿರುವ ಎಲ್ಲ ಪದವೀದರ ಮತದಾರರು ಮೂರನೇ ಹಾಗೂ ಕೊನೆ ಹಂತದ ನೋಂದಣಿ ಕಾರ್ಯ ಮುಂದುವರೆದಿರುವುದರಿಂದ ಇದುವರೆಗೆ ನೋಂದಣಿ ಮಾಡಿಕೊಳ್ಳದಿರುವ ಪದವೀಧರರು ತಮ್ಮ ಹೆಸರನ್ನು ಸೂಕ್ತ ಅರ್ಜಿ  ಹಾಗೂ ದಾಖಲೆ ಸಲ್ಲಿಸಿ ಮತಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಈ ಹಿಂದೆ ಮತದಾರರ ಪಟ್ಟಿಯಲ್ಲಿರುವವರೂ ಕೂಡಾ ಮತ್ತೊಮ್ಮೆ ಹೊಸದಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ವಾಯ್. ಚಿಕ್ಕಟ್ಟಿ ಅವರು ಸ್ವಾಗತಿಸಿ, ವಿಪ ಸದಸ್ಯ ಎಸ್.ವಿ. ಸಂಕನೂರ ಅವರು ಪದವೀಧರ ಕ್ಷೇತ್ರದ ಮತದಾರರಿಗೆ ಹಾಗೂ ವಿಶೇಷವಾಗಿ ಶಿಕ್ಷಕ ಸಮುದಾಯಕ್ಕೆ ಮಾಡಿದ ಸೇವೆಯನ್ನು ಪರಿಗಣಿಸಿ ಮತ್ತೊಮ್ಮೆ ಅವರನ್ನು ಬೆಂಬಲಿಸಿ ಆಯ್ಕೆ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಪ್ರಾಚಾರ್ಯ ವಿನಯ ಚಿಕ್ಕಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಎನ್.ವಿ.ಜೋಶಿ ಸೇರಿದಂತೆ ಶಿಕ್ಷಕ ಸಮೂಹ ಉಪಸ್ಥಿತರಿದ್ದರು.