ಬೆಂಗಳೂರು, ಆ 20 ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಕಾರ್ಯಕರ್ತರು ಮತದಾರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸುಳ್ಯದ ಶಾಸಕ ಎಸ್.ಅಂಗಾರ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಮಗೆ ಸಚಿವ ಸ್ಥಾನ ಸಿಕ್ಕೆ ಸಿಗಲಿದೆ ಎಂಬ ವಿಶ್ವಾಸವಿತ್ತು ಆದರೆ ಕೈತಪ್ಪಿದಕ್ಕಾಗಿ ತುಂಬಾ ನೋವಿದೆ,ಏಕೆ ಹೀಗಾಗಿದೆ ಎಂಬುದರ ಮಾಹಿತಿ ಇಲ್ಲ ಆದರೆ ಒಂದಂತೂ ಸತ್ಯ ಸಚಿವ ಸ್ಥಾನ ಸಿಗಲಿಲ್ಲ ಎಂದು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ,ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು.ಗೋವಿಂದ ಕಾರಜೋಳ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ತಮಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು.ಮೂರು ಬಾರಿ ಗೆದ್ದವನು ಎಂಬ ಕಾರಣಕ್ಕೆ ಪ್ರಭು ಚೌವ್ಹಾಣ್ ಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ತಮಗೆ ಬೇಸರವಿಲ್ಲ.ಈಗ ಯಾವುದಾದರೂ ಒಳ್ಳೆಯ ನಿಗಮ ಮಂಡಳಿ ಕೊಟ್ಟರೆ ಸಾಕು ತೃಪ್ತಿಯಾಗುತ್ತದೆ ಹಾಗೂ ಎರಡನೆ ಹಂತದ ಸಂಪುಟ ವಿಸ್ತರಣೆ ವೇಳೆ ತಮಗೆ ಸಚಿವ ಸ್ಥಾನ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಉಮೇಶ್ ಕತ್ತಿ, ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ ಜೊತೆಗೆ ಪಕ್ಷದಲ್ಲೂ ಹಿರಿಯನಾಗಿದ್ದೇನೆ.20 ಜನ ಹಿರಿಯರಿದ್ದು ಯಾರಿಗೂ ಸಚಿವ ಸ್ಥಾನ ನೀಡಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪ ಲೆಕ್ಕಾಚಾರ ಮಾಡಿ ಯುವಕರಿಗೆ ಆದ್ಯತೆ ನೀಡಿದ್ದಾರೆ.ತಮ್ಮ ಕ್ಷೇತ್ರದ ಜನ ಆಶೀರ್ವಾದ ಹಿನ್ನಲೆಯಿಂದಾಗಿ ಎಂಟು ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ.ಸಚಿವ ಸ್ಥಾನ ಕೊಟ್ಟರೆ ಹೆಚ್ಚು ಕೆಲಸ ಮಾಡಬೇಕೆಂದು ಉದ್ದೇಶ ಇತ್ತು ಆದರೆ ಕೊಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನವನ್ನು ಯಾವ ಲೆಕ್ಕಾಚಾರದಲ್ಲಿ ನೀಡಿದರು ಎಂದು ಅರ್ಥ ಆಗುತ್ತಿಲ್ಲ,ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಲ್ಲ.ಇಂದು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಉಮೇಶ್ ಕತ್ತಿ ತಿಳಿಸಿದರು.