ಪ್ಯಾರಿಸ್, ಮೇ 23, ಕೋವಿಡ್-19 ವೈರಸ್ ಹರಡುವ ಭೀತಿಯಿಂದ ಕಳೆದೆರಡು ತಿಂಗಳಿಂದ ಮುಚ್ಚಲ್ಪಟ್ಟ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಫ್ರಾನ್ಸ್ ಸರ್ಕಾರ ಅನುಮತಿ ನೀಡಿದೆ. ಆದರೆ ಭಕ್ತಾದಿಗಳು ಮುಖಕ್ಕೆ ಮಾಸ್ಕ್ ಧರಿಸಬೇಕು ಎಂಬ ನಿಯಮ ಕಡ್ಡಾಯಗೊಳಿಸಲಾಗಿದೆ ಎಂದು ಫ್ರಾನ್ಸ್‌ನ ಆಂತರಿಕ ಸಚಿವಾಲಯ ಶನಿವಾರ ಪ್ರಕಟಿಸಿದೆ.ಧಾರ್ಮಿಕ ಕೂಟಗಳಿಗೆ ಹೊಸ ನಿಯಮಗಳನ್ನು ರೂಪಿಸುವ ಆದೇಶ ಹೊರಡಿಸಿರುವುದಾಗಿ ಸಚಿವಾಲಯ ಹೇಳಿದೆ.
ಹೊಸ ಆದೇಶದಡಿ, ಕೊರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಮಾರ್ಚ್ ತಿಂಗಳಲ್ಲಿ ವಿಧಿಸಲಾದ ಧಾರ್ಮಿಕ ಸಭೆಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗುವುದು. ಆದರೆ ಸಾಮೂಹಿಕ ಆರಾಧನೆಯಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸುವುದು, ಆರಾಧಕರ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದು ಮತ್ತು ಕೈ ತೊಳೆಯುವುದು ಸೇರಿದಂತೆ ಮುಂತಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.