ಹುಕ್ಕೇರಿ 29: ವಿರೋಧ ಪಕ್ಷಗಳು ನೆರೆ ಪರಿಹಾರ ವಿತರಣೆಯಲ್ಲಿ ಬಿಜೆಪಿ ಸರಕಾರ ಎಡವಿದೆ ಎನ್ನುವುದು ಸಮಂಜಸವಲ್ಲ. ಸಂತ್ರಸ್ಥರಿಗೆ ಉಂಟಾಗಿರುವ ಹಾನಿ ಸಮೀಕ್ಷೆ, ಪರಿಶೀಲನೆಯ ನಂತರ ಕೇಂದ್ರ ಸರಕಾರಕ್ಕೆ ಮನವಿಸಿಕೊಳ್ಳಬೇಕು.ಇದು ಗೊತ್ತಿದ್ದರೂ ಅಪಪ್ರಚಾರ ಮಾಡುತ್ತಿರುವುದು ಖೇದಕರವೆಂದು ಶಾಸಕ ಉಮೇಶ ಕತ್ತಿ ಹೇಳಿದರು.
ಅವರು ರವಿವಾರದಂದು ಸ್ಥಳೀಯ ಹಿರೇಮಠದ ದಸರಾ ಉತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ಪಕ್ಷ ಅಥವಾ ಬೇರೆ ಪಕ್ಷದ ಸರಕಾರ ಆಡಳಿತದಲ್ಲಿರಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಅದರ ವಿರುದ್ಧ ಧ್ವನಿ ಎತ್ತುವ ಕಾರ್ಯ ಮಾಡುತ್ತಾ ಬಂದಿರುವೆ.ಆದರೆ ತಾಂತ್ರಿಕ ಮತ್ತು ಸೈದ್ಧಾಂತಿಕವಾಗಿ ಆಗಬೇಕಾದ ಕಾರ್ಯ ಗಮನಿಸಿ ಸರಕಾರ ವಿಫಲವಾದಾಗ ಖಂಡಿಸಬೇಕೆಂದು ವಿರೋಧ ಪಕ್ಷಗಳಿಗೆ ಚುಚ್ಚಿದರು.ನೆರೆ ಸಂತ್ರಸ್ಥರಿಗೆ ಆರಂಭಿಕವಾಗಿ 10 ಸಾವಿರ ರೂಗಳನ್ನು ವಿತರಿಸಿದೆ.ಕುಸಿದ ಮನೆಗಳ ನಿರ್ಮಾಣಕ್ಕೆ ಪಾಯಾ ಭರಣಾ ಮಾಡಲು 1 ಲಕ್ಷ ರೂ ಬಿಡುಗಡೆ ಮಾಡಲಾಗುತ್ತಿದೆ.
ಹಂತ ಹಂತವಾಗಿ ಒಟ್ಟು 5 ಲಕ್ಷ ರೂ ಅವರಿಗೆ ನೆರವು ಒದಗಿಸುವುದು ನಿಶ್ಚಿತ. ಜತೆಗೆ ಸರಕಾರವೇ ಎಲ್ಲ ಕಾರ್ಯ ಮಾಡಬೇಕು ಎಂದು ಹೇಳುವುದಕ್ಕಿಂತ ಸಹಕಾರದಿಂದ ನಿರಾಶ್ರ್ರಿತರಿಗೆ ಬದುಕಿನ ಭರವಸೆ ತುಂಬಬೇಕಾದ ಕರ್ತವ್ಯ ಎಲ್ಲರದ್ದಾಗಿದೆ ಎಂದರು. ಮಠದಿಂದ ಪ್ರತಿ ವರ್ಷ ಅದ್ದೂರಿ ದಸರಾ ಉತ್ಸವ ಮಾಡುತ್ತಿದ್ದೇವು.ಆದರೆ ನಮ್ಮ ಭಾಗದಲ್ಲಿ ಈಬಾರಿ ಆಗಿರುವ ಅತಿವೃಷ್ಠಿ ಹಾಗೂ ಕಳೆದ ವರ್ಷ ಮಡಿಕೇರಿ, ಮಂಗಳೂರು, ಹಾಸನದಲ್ಲಿ ಆದ ಮಳೆ ಹಾನಿಗಾಗಿ ಮಾನವೀಯ ದೃಷ್ಟಿಯಿಂದಶ್ರೀಗಳ ಆಶಯದಂತೆ ಎರಡು ವರ್ಷವೂ ಅದ್ದೂರಿ ಉತ್ಸವಕ್ಕೆ ತೆರೆ ಎಳೆದು ಸಂತ್ರಸ್ಥರ ನೋವಿಗೆ ಬಾಗಿಯಾಗುತ್ತಿದ್ದೇವೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ ಸಿದ್ದಲಿಂಗಯ್ಯಾ ಹಿರೇಮಠ ಅವರು ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಪರಿಸರ ವೈಪರೀತ್ಯ ತಡೆಯಲು ಮತ್ತು ಜನರ ಆರೋಗ್ಯಕ್ಕೆ ಮಾರಕವಾದ ಪ್ರಲ್ಯಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಪ್ರಲ್ಯಾಸ್ಟಿಕ್ ಮುಕ್ತ ಭಾರತ ಅಭಿಯಾನ ಪ್ರಾರಂಭಿಸಿರುವ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರ
ಕಾರ್ಯ ನಿಜಕ್ಕೂ ಸಾಮಾಜಿಕ ಕಳಕಳಿಗೆ ನಿದರ್ಶನವೆಂದರು. ಇದರ ಜತೆಗೆ ಪ್ರವಾಹ ಸಂತ್ರಸ್ಥರಲ್ಲಿ ಬದುಕಿನ ಭರವಸೆ ತುಂಬುವ ನಿಟ್ಟಿನಲ್ಲಿ ಅವರಿಗೆ
ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ನುಡಿದರು.ಶ್ರೀಮಠ ಸಾಮಾಜಿಕ, ಧಾರ್ಮಿಕ, ಶೈಕ್ಷಣೀಕ, ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಹಲವಾರು ವಿಧಾಯಕ ಕಾರ್ಯಗಳಿಂದ ದೇಶ ವಿದೇಶದಲ್ಲಿ ಹುಕ್ಕೇರಿ ಪಟ್ಟಣದ ಹೆಸರು ಬೆಳಗುವಂತೆ ಮಾಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಆನಂದ ಮಾಮನಿ, ದುರ್ಯೋಧನ ಐಹೊಳೆ. ಅವರು ಮಾತನಾಡಿ ಶ್ರೀಮಠ ಸಾಮಾಜಿಕ ಕಳಕಳಿಗೆ ಹೆಸರಾಗಿದೆ.ಇವರ ಕಾರ್ಯವನ್ನು ನಾಡಿನ ಎಲ್ಲ ಜನತೆ ಮೆಚ್ಚುತ್ತದೆ ಎಂದರು.ಬೆಳಿಗ್ಗೆ ತಹಸೀಲ್ದಾರ
ರೇಷ್ಮಾ ತಾಳಿಕೋಟೆ ಅವರು ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಯುಕ್ತವಾಗಿ
ದಸರಾ ಮಹೋತ್ಸವ ಪ್ರಾರಂಭಗೊಂಡಿತು. ಮಹೋತ್ಸವದ ಮಹಾಮಂಟಪವನ್ನು ಶಾಸಕ ಆನಂದ ಮಾಮನಿ, ಗೋ ಮಂಟಪವನ್ನು ಶಾಸಕ ದುರ್ಯೋಧನ ಐಹೊಳೆ ಉದ್ಘಾಟಿಸಿದರು. ನಂತರ ಆಯ್ದ ನೆರೆ ಸಂತ್ರಸ್ಥರಿಗೆ ಕಿಟ್ ಮತ್ತು ತಲಾ 1 ಸಾವಿರ ರೂಗಳನ್ನು ಶ್ರೀಮಠದಿಂದ ವಿತರಿಸಿದರು.
ಕಟಕೋಳ ಎಂ.ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯರು ಸಾನಿಧ್ಯ ವಹಿಸಿ ಮತ್ತು ಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯರು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಚಿಕ್ಕೋಡಿ ಶೈಕ್ಷಣೀಕ ಜಿಲ್ಲಾ ಡಿಡಿಪಿಐ ಮೋಹನ ಹಂಚಾಟೆ, ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯ ಅಧಿಕಾರಿಗಳು, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇ ಶಕರು ಹಾಗೂ ತಾಲೂಕಾಡಳಿತದ ಎಲ್ಲ ಇಲಾಖೆಗಳ ಅಧಿಕಾರಿಗಳು, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಚೇರಮನ್ ಮಹಾವೀರ ನಿಲಜಗಿ, ಬಿಜೆಪಿ ಮಂಡಲ
ಅಧ್ಯಕ್ಷ ಪರಗೌಡ ಪಾಟೀಲ, ಪುರಸಭೆ ಸದಸ್ಯರು ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. ಶ್ರೀಶೈಲ ಹಿರೇಮಠ ಸ್ವಾಗತಿಸಿದರು.ಸಿ.ಎಂ.ದರಬಾರೆ ನಿರೂಪಿಸಿ ವಂದಿಸಿದರು.