ನವದೆಹಲಿ, ನ.18 : ಸಂಸತ್ತಿನ ಚಳಿಗಾಲದ ಅಧಿವೇಶನವು ಎಲ್ಲ ವಿಷಯಗಳ ಬಗ್ಗೆ ಗುಣಮಟ್ಟದ ಚರ್ಚೆಗಳಿಗೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧಿವೇಶನ ಪ್ರಾರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, ನಾವು ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾದ ಚರ್ಚೆಗಳನ್ನು ಬಯಸುತ್ತೇವೆ. ಗುಣಮಟ್ಟದ ಚರ್ಚೆಗಳು ನಡೆಯುವುದು ಮುಖ್ಯ. ಸಂವಾದ ಮತ್ತು ಚರ್ಚೆಗಳು ಇರಬೇಕು. ಸಂಸತ್ತಿನಲ್ಲಿ ಚರ್ಚೆಗಳನ್ನು ಉತ್ಕೃಷ್ಟಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಇದು 2019 ರ ಕೊನೆಯ ಸಂಸತ್ ಅಧಿವೇಶನ ಎಂದು ಹೇಳಿದ ಪ್ರಧಾನಿ, ಇದು ರಾಜ್ಯಸಭೆಯ 250 ನೇ ಸಂಸತ್ ಅಧಿವೇಶನವಾಗಿರುವುದರಿಂದ ಈ ಸದನ ಬಹಳ ಮುಖ್ಯವಾದುದು. ಈ ಅಧಿವೇಶನದ ಸಂದರ್ಭದಲ್ಲೇ ಇದೇ 26 ರಂದು, ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ, ನಮ್ಮ ಸಂವಿಧಾನವು 70 ವರ್ಷಗಳನ್ನು ಪೂರೈಸಿದ ದಿನವಾಗಲಿದೆ ಎಂದು ಹೇಳಿದರು. ಹಿಂದಿನ ಸಂಸತ್ತಿನ ಅಧಿವೇಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ, ಎಲ್ಲಾ ಸಂಸದರ ಬೆಂಬಲ ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಹಿಂದಿನ ಅಧಿವೇಶನವು ಅದ್ಭುತವಾಗಿತ್ತು. ಅದು ಸರ್ಕಾರ ಅಥವಾ ಸ್ಪೀಕರ್ ಪೀಠ ಮಾತ್ರವಲ್ಲ ಇಡೀ ಸಂಸತ್ತಿನ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.