ನವದೆಹಲಿ, ಅ 09: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ರೈತರನ್ನು ಕಡೆಗಣಿಸಿದ್ದು, ಕೇವಲ ಜಾಹೀರಾತುಗಳಲ್ಲಿ ಮಾತ್ರ ರೈತರನ್ನು ಸ್ಮರಿಸುತ್ತಿದೆ ಎಂದು ಆರೋಪಿಸಿದ್ದಾರೆ. ರೈತರ ಸಮಸ್ಯೆಯ ಬಗ್ಗೆ ಟ್ವಿಟರ್ ನಲ್ಲಿ ಪ್ರಸ್ತಾಪಿಸಿರುವ ಪ್ರಿಯಾಂಕಾ, ರೈತರಿಗೆ ಕಿರುಕುಳ ನೀಡಲು ಉತ್ತರ ಪ್ರದೇಶ ಸರ್ಕಾರ ಹೊಸ ವಿಧಾನ ಕಂಡುಕೊಂಡಿದೆ. ಸಾಲದ ಹೆಸರಿನಲ್ಲಿ ವಂಚಿಸುತ್ತಿರುವುದಲ್ಲದೆ, ವಿದ್ಯುತ್ ಬಿಲ್ ಹೆಸರಿನಲ್ಲಿ ಜೈಲಿಗಟ್ಟುತ್ತಿದೆ ಎಂದು ಟೀಕಿಸಿದ್ದಾರೆ. ಮಳೆ ಹಾಗೂ ಪ್ರವಾಹದಿಂದ ಬೆಳೆ ನಷ್ಟ ಎದುರಿಸುತ್ತಿರುವ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಟ್ವಿಟರ್ ಮೂಲಕ ಹರಿಹಾಯ್ದಿದ್ದಾರೆ. ಸಾಲದ ಹಿನ್ನೆಲೆಯಲ್ಲಿ ಮಹೊಬಾ ಮತ್ತು ಹಮಿರ್ ಪುರದ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾದ್ರಾ ಕೆಂಡ ಕಾರಿದ್ದಾರೆ.