ಶ್ರೀನಗರ, ಫೆ .7, ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರ ಮುಂದುವರೆಯಲಿದೆ. ಏಕಮುಖ ಸಂಚಾರ ಯಶಸ್ವಿಯಾಗಿದೆ ಎಂದು ದೃಢಪಟ್ಟಿದೆ. ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸಾಮಾನ್ಯವಾಗಿದೆ. ಎರಡೂ ಕಡೆ ಸಂಚಾರವಿದಿದ್ದರೆ, ಗಂಟೆಗಳವರೆಗೆ ಭಾರಿ ವಾಹನದಟ್ಟಣೆ, ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಶುಕ್ರವಾರ, ಜಮ್ಮುವಿನಿಂದ ಶ್ರೀನಗರದ ಕಡೆಗೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ವಿರುದ್ಧ ದಿಕ್ಕಿನಿಂದ ಯಾವುದೇ ವಾಹನವನ್ನು ಅನುಮತಿ ನೀಡಲಾಗುವುದಿಲ್ಲ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಬೆಳಿಗ್ಗೆ ಯುಎನ್‌ಐಗೆ ತಿಳಿಸಿದ್ದಾರೆ. ‘ಲಘು ಮೋಟಾರು ವಾಹನಗಳಿಗೆ (ಎಲ್‌ಎಂವಿ) ಬೆಳಿಗ್ಗೆ ಚಲಿಸಲು ಅವಕಾಶವಿದ್ದರೆ, ಮಧ್ಯಾಹ್ನ ಭಾರೀ ಮೋಟಾರು ವಾಹನಗಳಿಗೆ (ಎಚ್‌ಎಂವಿ) ಅವಕಾಶ ನೀಡಲಾಗುವುದು. ಮುಂದಿನ ಆದೇಶ ಬರುವವರೆಗೆ ಹೆದ್ದಾರಿಯಲ್ಲಿ ಏಕಮುಖ ಸಂಚಾರ ಮಾತ್ರ ಮುಂದುವರಿಯಲಿದೆ.’ ಎಂದು ಅವರು ಹೇಳಿದರು.
ಈ ಮಧ್ಯೆ, ಕೇಂದ್ರಾಡಳಿತ ಪ್ರದೇಶ ಲಡಾಖ್ (ಯುಟಿ) ಅನ್ನು ಕಾಶ್ಮೀರದೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆಯಾದ 434 ಕಿ.ಮೀ ಉದ್ದದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಕಳೆದ ಎರಡು ತಿಂಗಳಿನಿಂದ ಮುಚ್ಚಲ್ಪಟ್ಟಿದೆ. ಹೆದ್ದಾರಿಯಲ್ಲಿ 6 ರಿಂದ 12 ಅಡಿಗಳಿಗಿಂತ ಹೆಚ್ಚು ಹಿಮ ಬಿದ್ದಿದೆ. ಜೊಜಿಲಾ ಪಾಸ್ ಸೇರಿದಂತೆ ಅನೇಕ ಪ್ರತೇಶಗಳು ಭಾರೀ ಹಿಮದಿಂದ ಹೆಪ್ಪುಗಟ್ಟಿವೆ. ಹಾಗೆಯೇ, ಹಿಮ ಆವರಿಸುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಅನ್ನು ರಾಜೌರಿ ಮತ್ತು ಪೂಂಚ್ ಹಾಗೂ ಅನಂತ್ ನಾಗ್-ಕಿಶ್ತ್ ವಾರ್ ರಸ್ತೆಯೊಂದಿಗೆ ಸಂಪರ್ಕಿಸುವ ಐತಿಹಾಸಿಕ 86 ಕಿ.ಮೀ ಉದ್ದದ ಮೊಘಲ್ ರಸ್ತೆ ಕಳೆದ ಎರಡು ತಿಂಗಳಿನಿಂದ ಮುಚ್ಚಲ್ಪಟ್ಟಿದೆ. ಈ ರಸ್ತೆಗಳು ಮಾರ್ಚ್ ಇಲ್ಲವೇ ಏರ್ಪಿಲ್ ನಲ್ಲಿ ಮತ್ತೆ ವಾಹನ ಸಂಚಾರಕ್ಕೆ ತೆರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.