ವಿಷಕಾರಿ ಅನಿಲ ಸೇವಿಸಿ ಓರ್ವ ಸಾವು: 8 ಮಂದಿ ಗಂಭೀರ

ವಿಷಕಾರಿ ಅನಿಲ ಸೇವಿಸಿ ಓರ್ವ ಸಾವು: 8 ಮಂದಿ ಗಂಭೀರ

ಹೈದರಾಬಾದ್ 27: ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ವಿಷಕಾರಿ ಅನಿಲ ಸೇವಿಸಿದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಅನಕಾಪಲ್ಲಿ ಜಿಲ್ಲೆಯ ಪರವಾಡದ ಖಾಸಗಿ ಫಾರ್ಮಾ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ ಕಾರ್ಮಿಕರು ಹೈಡ್ರೋಕ್ಲೋರಿಕ್ ಆಸಿಡ್ ಮತ್ತು ಕ್ಲೋರೋಫಾರ್ಮ್ ಮಿಶ್ರಣ ಮಾಡುವಾಗ ಉಂಟಾಗಿರುವ ಅನಿಲವನ್ನು ಸೇವಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,.

ಕಂಪನಿಯು ವಿಷಕಾರಿ ಅನಿಲದ ಅಪಾಯಗಳ ಬಗ್ಗೆ ಕಾರ್ಮಿಕರಿಗೆ ಎಚ್ಚರಿಕೆ ನೀಡಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.