ಗಯಾನ, ಆ 8 ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರು. ಆದರೆ, ಭಾರತದ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಕೇಂದ್ರಕರಿಸಿ ಹಾಗೂ ತಂಡದ ಜವಾಬ್ದಾರಿ ತೆಗೆದುಕೊಳ್ಳುವಂತೆ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಸಹ ಆಟಗಾರರಿಗೆ ಕರೆ ನೀಡಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಹೇಳಿಕೊಳ್ಳುವಂತ ಪ್ರದರ್ಶನ ತೋರಿಲ್ಲ. ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿತ್ತು. ಆಡಿದ ಎಂಟು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿತ್ತು. ವಿಂಡೀಸ್ ಪರ ಬೌಲಿಂಗ್ ಅದ್ಭುತ ಪ್ರದರ್ಶನ ತೋರಿದ್ದರೂ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಇದು ತಂಡದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ಬಗ್ಗೆ ತಂಡದೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿತ್ತು. ಸುದೀರ್ಘ ಅವಧಿಯಲ್ಲಿ ನಮ್ಮವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಈ ಬಗ್ಗೆ ತಂಡದೊಂದಿಗೆ ಮಾತನಾಡಿದ್ದು, ಬ್ಯಾಟಿಂಗ್ ಲೈನ್ ಅಪ್ ಉತ್ತಮಪಡಿಸುಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೋಲ್ಡರ್ ತಿಳಿಸಿದರು. ವಿಶ್ವಕಪ್ ಬಳಿಕ ಚುಟುಕು ಸರಣಿಯಲ್ಲಿ ಭಾರತದ ವಿರುದ್ಧ 3-0 ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಸರಣಿಯಲ್ಲಿ ಕೂಡ ವಿಂಡೀಸ್ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರು. ಆದರೆ, ಚುಟುಕು ಸರಣಿಗೆ ಅಲಭ್ಯರಾಗಿದ್ದ ಕ್ರಿಸ್ ಗೇಲ್ ಏಕದಿನ ಸರಣಿಗೆ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಏಕದಿನ ಮಾದರಿಯಲ್ಲಿ ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಪರ ಉತ್ತಮ ದಾಖಲೆ ಮಾಡಿದ್ದಾರೆ. ಬ್ರಿಯನ್ ಲಾರ(10405) ಅವರನ್ನು ಹಿಂದಿಕ್ಕಲು ಗೇಲ್ಗೆ ಕೇವಲ 13 ರನ್ಗಳ ಅಗತ್ಯವಿದೆ ಎಂದು ಐಸಿಸಿ ವರದಿ ತಿಳಿಸಿದೆ. ಕಳೆದ ಹಲವು ವರ್ಷಗಳಲ್ಲಿ ಕ್ರೀಸ್ ಗೇಲ್ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಈಗಲೂ ತಂಡದಲ್ಲಿ ಇರುವುದು ನಮಗೆ ಅದ್ಭುತ ಅನುಭವ ನೀಡಲಿದೆ. ಇವರು ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ತಂಡದಲ್ಲಿ ಇದ್ದರೆ ಆಟಗಾರರಲ್ಲಿ ಹೊಸ ಹುಮ್ಮಸ್ಸು ಹಾಗೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ಸಂತೋಷ ಮನೆ ಮಾಡಿರುತ್ತದೆ ಎಂದು ಹೋಲ್ಡರ್ ಹೇಳಿದ್ದಾರೆ.