ಕೆಎಸ್ಆರ್ಟಿಸಿ ಬಸ್ ಮಗುಚಿ ಬಿದ್ದು ಓರ್ವ ಪ್ರಯಾಣಿಕ ಸಾವು; 25 ಮಂದಿಗೆ ಗಾಯ

ಹಾಸನ,.25  ಕೆಎಸ್ಆರ್ಟಿಸಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, 25ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚನ್ನರಾಯಪಟ್ಟಣದ ಹಿರಿಸಾವೆ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಭಿಷೇಕ್ (28) ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೆಲವು ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಿರಿಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನವನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.