ಮತ್ತೆ ಏಕಾಏಕೀ ಶನೇಶ್ವರ ದೇವಸ್ಥಾನ ತೆರವುಗೊಳಿಸಿದ ರೈಲ್ವೆ ಇಲಾಖೆ

ಬೆಂಗಳೂರು, ಅ 19:   ಮೆಜೆಸ್ಟಿಕ್ ಸಮೀಪದ ಶನೇಶ್ವರ ದೇವಸ್ಥಾನಕ್ಕೆ ಇಂದು ಸಾಕಷ್ಟು ಭಕ್ತರು ದೇವರ ದರ್ಶನ ಪಡೆಯಲು ಬಂದಿದ್ದರು. ಆದರೆ, ದೇವಸ್ಥಾನವನ್ನು ರೈಲ್ವೇ ಇಲಾಖೆ ಏಕಾಏಕೀ ತೆರಳುಗೊಳಿಸಿರುವುದನ್ನು ಕಂಡು ದಂಗಾಗಿದ್ದಾರೆ.

ಹೈಕೋರ್ಟ್ ಆದೇಶದಂತೆ ರೈಲ್ವೇ ಇಲಾಖೆಯ ಸಿಬ್ಬಂದಿ ಇಲಾಖೆಯ ಜಾಗದಲ್ಲಿದ್ದ ಶನೇಶ್ವರ ದೇವಸ್ಥಾನವನ್ನು ಸ್ಥಳಾಂತರಿಸಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿ ಇರದ ಭಕ್ತರು ಇಂದು ಶನೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ದೇಗುಲ, ದೇವರ ಮೂರ್ತಿ ಇರದಿದ್ದನ್ನು ಕಂಡ ಭಕ್ತರು ರೈಲ್ವೇ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈಲ್ವೇ ಇಲಾಖೆ ಸಿಬ್ಬಂದಿಯು ಶನೇಶ್ವರನ ಮೂರ್ತಿಯನ್ನು ಶ್ರೀರಾಮಪುರದ ಅಯ್ಯಪ್ಪ ದೇಗುಲದಲ್ಲಿ ಇಟ್ಟಿದ್ದಾರೆ. ಆದರೆ, ದೇವರ ಪಾದವನ್ನು ಮಾತ್ರ ಅಲ್ಲಿಯೇ ಬಿಟ್ಟಿದ್ದಾರೆ. ಇದನ್ನು ನೋಡಿದ ಭಕ್ತರು ರೈಲ್ವೇ ಇಲಾಖೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. 

ನಲವತ್ತು ವರ್ಷಗಳಿಂದ ಶನೇಶ್ವರ ದೇವಸ್ಥಾನ ಒಂದೇ ಸ್ಥಳದಲ್ಲಿದೆ. ಆದರೆ, ಅದನ್ನು ಪದೇ ಪದೇ ರೈಲ್ವೇ ಇಲಾಖೆಯವರು ಸ್ಥಳಾಂತರಿಸುತ್ತಿದ್ದಾರೆ. ಹೀಗೆ ಮಾಡಿದರೆ ಹೇಗೆ. ಇಲ್ಲಿಗೆ ಬಂದು ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು. ಇಷ್ಟು ಜಾಗ ಖಾಲಿ ಇದೆ. ಇದರಲ್ಲಿ ದೇವಸ್ಥಾನಕ್ಕೆ ಒಂದಿಷ್ಟು ಜಾಗ ಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ. 

ಇದುವರೆಗೂ ಮೂರು ಬಾರಿ ಶನೇಶ್ವರ ದೇವಸ್ಥಾನವನ್ನು ಸ್ಥಳಾಂತರಿಸಲಾಗಿದೆ. ಈ ಹಿಂದೆ ಶ್ರೀರಾಮಪುರದಿಂದ ಓಕಳಿಪುರಂಗೆ ದೇಗುಲವನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ರಸ್ತೆ ಅಗಲೀಕರಣಕದ ಉದ್ದೇಶದಿಂದ ರೈಲ್ವೇ ಇಲಾಖೆ ಸಿಬ್ಬಂದಿ ಆರು ತಿಂಗಳ ಹಿಂದಷ್ಟೇ ಮೆಜೆಸ್ಟಿಕ್ ಸಮೀಪದ ಸ್ಥಳಕ್ಕೆ ಶಿಫ್ಟ್ ಮಾಡಿತ್ತು. ಇದೀಗ ಅಲ್ಲಿಂದಲೂ ಶನೇಶ್ವರನನ್ನು ಓಕಳೀಪುರಂನಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಸ್ಥಳಾಂತರಿಸಿದೆ.