ರಾಯಚೂರು, ಆಗಸ್ಟ್ 25 ಕಾಲುವೆ ನೀರಿನ ವಿಚಾರಕ್ಕೆ ಜಗಳ ತೆಗೆದು ವೃದ್ಧನೋರ್ವನನ್ನು ದಾಯಾದಿಗಳೇ ಕೊಲೆ ಮಾಡಿರುವ ಘಟನೆ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ ಶಿವರುದ್ರಪ್ಪ(65) ಕೊಲೆಯಾದವರು. ದಾಯಾದಿಗಳಿಬ್ಬರ ಜಮೀನು ಅಕ್ಕ ಪಕ್ಕದಲ್ಲಿದ್ದವು. ಹಳೇ ವೈಷಮ್ಯದ ಹಿನ್ನೆಲೆ ನೀರು ಬಿಡದ ಕಾರಣ ಅಮರೇಶ್ ಹಾಗೂ ಇತರೆ 8 ಜನರು ಜಗಳ ತೆಗೆದು ಮಾರಕಾಸ್ತ್ರದಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹಲ್ಲೆ ವೇಳೆ ಮೃತರ ಮಗ ಶರಣಬಸಪ್ಪ ಅವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮರೇಶ್ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.