ಲೋಕದರ್ಶನ ವರದಿ
ಬಲಿತ ಮೇಲೂ ಗುರುಭಕ್ತಿ ಮೆರೆದ ಹಳೆಯ ವಿದ್ಯಾರ್ಥಿಗಳು
ಮಹಾಲಿಂಗಪುರ 12: ಕಲಿತ ಮೇಲೆ ಶಾಲೆಯ ಹಂಗೇನು? ಬಲಿತ ಮೇಲೆ ಗುರುವಿನ ಗೊಡವೆಯೇನು? ಎನ್ನುವ ಈ ಕಾಲದಲ್ಲಿ 18 ವರ್ಷಗಳ ಹಿಂದೆ ಕಲಿತವರು ಬಲಿತ ಮೇಲೂ ಮತ್ತೆ ಒಂದಾಗಿ ಅದೇ ಸ್ನೇಹಶಕ್ತಿ ಮತ್ತು ಅದೇ ಗುರುಭಕ್ತಿ ತೋರಿದರು.
ಮಹಾಲಿಂಗಪುರದ ಎಸ್ಸಿಪಿ ಪಿಯು ಕಾಲೇಜಿನಲ್ಲಿ 2006-07ನೇ ಸಾಲಿನಲ್ಲಿ ಪಿಯುಸಿ ಕಲಿತ ವಿದ್ಯಾರ್ಥಿಗಳು ರನ್ನಬೆಳಗಲಿಯ ಸುಕೂನ್ ಗಾರ್ಡನ್ ಹೊಟೇಲ್ನಲ್ಲಿ ಸಹಪಾಠಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡು ಸಂಭ್ರಮಿಸಿದರು.
ಕೆಲವು ಕ್ರಿಯಾಶೀಲ ಮತ್ತು ಸಂವೇದನಾಶೀಲ ವಿದ್ಯಾರ್ಥಿಗಳು ಆರು ತಿಂಗಳುಗಟ್ಟಲೇ ಹರಸಾಹಸ ಮಾಡಿ ಎಲ್ಲೆಲ್ಲೋ ಚದುರಿ ಹೋಗಿರುವ ತಮ್ಮ ಸಹಪಾಠಿಗಳನ್ನು ಸಂಪರ್ಕಿಸಿ ಎಲ್ಲರನ್ನೂ ಒಂದೆಡೆ ಸೇರಿಸಿ ಮತ್ತೆ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಒಂದೇ ಸ್ಥಳದಲ್ಲಿ ನೋಡುವ ಸೌಭಾಗ್ಯಕ್ಕೆ ಕಾರಣರಾದರು. ಅವರ ಎಡೆಬಿಡದ ಪ್ರಯತ್ನದಿಂದ ಸರ್ವರ ಸಮ್ಮಿಲನ ಸವಿನೆನಪಿನ ಸ್ವಾದ ನೀಡಿತು.
ಕಾರ್ಯಕ್ರಮಕ್ಕೂ ಮೊದಲು ತಮ್ಮ ನೆಚ್ಚಿನ ಗುರುವರ್ಯರನ್ನು ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ತಲೆಬಾಗಿ ನಮಿಸುವ ಮೂಲಕ ವೇದಿಕೆಗೆ ಸ್ವಾಗತಿಸಿದರು. ಗುರುಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಕೆ.ಎಸ್.ಗುಡೋಡಗಿ, ಎಸ್.ವಿ.ಸಿದ್ನಾಳ, ಎಸ್.ಎಚ್.ಮೆಳವಂಕಿ, ಶಿಕ್ಷಕರಾದ ಸಪನಾ ಅನಿಗೋಳ, ಎಸ್.ಜಿ.ಜುಟನಟ್ಟಿ, ಜಯಶ್ರೀ ಗುಡೋಡಗಿ, ಎಂ.ಐ.ಡಾಂಗೆ ಅವರನ್ನು ಸನ್ಮಾನಿಸಿದರು. ಉನ್ನತ ಹುದ್ದೆಯಲ್ಲಿ ಸಾಧನೆ ಮಾಡಿದ ಸಹಪಾಠಿಗಳನ್ನು ಕೂಡ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಅನಿಸಿಕೆ ಮೂಲಕ ಮೆಲಕು ಹಾಕಿದರು. ಉಪನ್ಯಾಸಕರು ಪಾಠದ ರೂಪದಲ್ಲಿ ಮಾತನಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ವಿದ್ಯಾರ್ಥಿಗಳು ಮಹಾರಾಷ್ಟ್ರದಿಂದ ಥರ್ಮಾಸ್ ಪ್ಲಾಸ್ಕ್ ಮತ್ತು ಚಹಾ ಕಪ್ಗಳ ಸೆಟ್ ತರಿಸಿ ಅವುಗಳನ್ನು ಬೆಂಗಳೂರಿಗೆ ರವಾನಿಸಿ ಅದರ ಮೇಲೆ ತಮ್ಮ ಬ್ಯಾಚ್ನ ಹೆಸರು ಬರೆಸಿ ಪ್ಯಾಕ್ ಮಾಡಿ ಸವಿನೆನಪಿಗಾಗಿ ಗುರುಗಳಿಗೆ ಉಡುಗೊರೆ ನೀಡಿದರು. ಥರ್ಮಾಸ್ ಪ್ಲಾಸ್ಕ್ ಚಹಾವನ್ನು ಬೆಚ್ಚಗಿಡುವಂತೆ ನಮ್ಮ ನೆನು ಕೂಡ ಹಚ್ಚ ಹಸಿರಾಗಿರಬೇಕು ಎಂದು ವಿನಂತಿಸಿದರು. ಅದರೊಂದಿಗೆ ಹೂಗಿಡದ ಸಸಿಯನ್ನೂ ನೀಡಿದರು. ಗಿಡ ಮತ್ತು ನೆನಪು ಬಾಡದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ನಂತರ ಗಾರ್ಡನ್ನಲ್ಲಿ ಎಲ್ಲ ಸಹಪಾಠಿಗಳು ಮತ್ತು ಗುರುಗಳು ಸಾಮೂಹಿಕ ಭಾವಚಿತ್ರ ಕ್ಲಿಕ್ಕಿಸಿಕೊಂಡರು. ನೆಚ್ಚಿನ ಗುರುಗಳೊಂದಿಗೆ ಶಿಷ್ಯರು ಮತ್ತು ನೆಚ್ಚಿನ ಬೆಸ್ಟೀಗಳೊಂದಿಗೆ ಸಹಪಾಠಿಗಳು ಸೆಲ್ಫಿಗೆ ಮೊರೆ ಹೋದರು. ಮೊದಲು ಗುರುಗಳಿಗೆ ಭರ್ಜರು ಭೋಜನ ಉಣಬಡಿಸಿ ನಂತರ ವಿದ್ಯಾರ್ಥಿಗಳು ಊಟ ಮಾಡಿದರು. ಆಮೇಲೆ ಗುರುಗಳನ್ನು ಬೀಳ್ಕೊಟ್ಟು ಸ್ನೇಹಿತರೆಲ್ಲಾ ಸೇರಿ ಹಾಡಿ, ನಲಿದು ಸಡಗರದಿಂದ ಸಂಭ್ರಮಿಸಿದರು.