ಬೆಂಗಳೂರು,ಜು. 8: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ವಿಕಾಸ ಸೌಧ ಕಚೇರಿ ಸಿಬ್ಬಂದಿಗೂ ಕೊರೋನಾ ಸೋಂಕು ದೃಢಪಟ್ಟಿದೆ.
ಈ ವಿಚಾರವನ್ನು ಸ್ವತಃ ರೇಣುಕಾಚಾರ್ಯ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಈ ಸಿಬ್ಬಂದಿ ಕಾಲುನೋವಿನ ಹಿನ್ನೆಲೆಯಲ್ಲಿ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಪರೀಕ್ಷೆಗೊಳಪಟ್ಟಾಗ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಬೆಂಗಳೂರಿನ ತಮ್ಮ ಸರ್ಕಾರಿ ಅಧಿಕೃತ ಕಚೇರಿಯ ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್ ಪತ್ತೆಯಾಗಿದ್ದು , ಇಂದಿನಿಂದ ಶುಕ್ರವಾರ ಸಂಜೆವರೆಗೂ ಬೆಂಗಳೂರಿನ ನನ್ನ ಸರ್ಕಾರಿ ಗೃಹ ಕಚೇರಿಯಲ್ಲಿ ನಾನು ಕಾರ್ಯನಿರ್ವಹಿಸಲಿದ್ದು , ಸಾರ್ವಜನಿಕರು ಹಾಗು ನನ್ನ ಹಿತೈಷಿಗಳು ನೇರವಾಗಿ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ . ರಾಜ್ಯಾದ್ಯಂತ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕೆಲವು ಶಾಸಕರು, ಸಂಸದರು ಹಾಗೂ ಎಂಎಲ್ಸಿಗಳಿಗೂ ಕೂಡ ಕೋವಿಡ್ 19 ಪತ್ತೆಯಾಗಿ ಆತಂಕ ಸೃಷ್ಟಿಸಿದೆ . ಸಾರ್ವಜನಿಕರು ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಪಾಡಿಕೊಂಡು , ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಯಮಾವಳಿಗಳನ್ನು ಪಾಲಿಸುವಂತೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ವಿಕಾಸಸೌಧ ರೇಣುಕಾಚಾರ್ಯ ಕಚೇರಿಯಲ್ಲಿ ಸ್ಯಾನಿಟೈಸ್ ಮಾಡಲಾಯಿತು.