ಜಮ್ಮು; ನಿಷೇಧಾಜ್ಞೆಯ ನಡುವೆ ಮಾರುಕಟ್ಟೆಗಳು ಭಾಗಶಃ ಮುಕ್ತ, ಶಾಲೆಗಳು ಬಂದ್

ಜಮ್ಮು, ಆಗಸ್ಟ್ 9      ಜಮ್ಮು- ಕಾಶ್ಮೀರ ರಾಜ್ಯಕ್ಕೆ ವಿಶೇಷಾಧಿಕಾರ ಕಲ್ಪಿಸುವ   ಸಂವಿಧಾನ ವಿಧಿ 370 ರದ್ದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ  ರಾಜ್ಯದೆಲ್ಲೆಡೆ ಸಿ ಆರ್ ಪಿಸಿ  ಕಲಂ 144ರಡಿ ನಿರ್ಬಂಧವಿಧಿಸಿದ್ದರೂ, ಜಮ್ಮುವಿನಲ್ಲಿ ಮಾರುಕಟ್ಟೆಗಳು  ಶುಕ್ರವಾರ  ಭಾಗಶಃ ತೆರೆದಿದ್ದವು.  

ಜಿಲ್ಲಾಡಳಿತ ಅಧಿಕೃತವಾಗಿ  ನಿಷೇಧಾಜ್ಞೆಯನ್ನು  ತೆರವುಗೊಳಿಸದಿದ್ದರೂ, ಮಾರುಕಟ್ಟೆಗಳು ಭಾಗಶಃ ತೆರೆದಿದ್ದವು. 

ಅಗತ್ಯ ವಸ್ತುಗಳನ್ನು ಖರೀದಿಸಲು  ಮಾರುಕಟ್ಟೆಗಳಿಗೆ ಜನರು ಮುಗಿಬಿದ್ದಿದ್ದಾರೆ.  

ಜಮ್ಮು  ಜಿಲ್ಲೆಯ ಹಳೆಯ ನಗರ,ನರ್ವಾಲ್, ಭಟಿಂಡಿ ಹಾಗೂ ಗುಜ್ಜಾರ್  ನಗರದ ಕೆಲ ಭಾಗಗಳಲ್ಲಿ  ನಿಷೇದಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಇತರ ಭಾಗಗಳಲ್ಲಿ  ಜನಜೀವನ ಸಹಜ ಸ್ಥಿತಿಗೆ  ತ್ವರಿತವಾಗಿ ಮರಳುತ್ತಿದೆ. 

ಸಾಂಬಾ, ಕತುವಾ ಹಾಗೂ ಉದಾಂಪುರ್ ಜಿಲ್ಲೆಗಳಲ್ಲಿ  ಶಾಲೆಗಳು ತೆರೆದಿದ್ದು, ಉಳಿದ ಜಿಲ್ಲೆಗಳಲ್ಲಿ ಶಾಲೆಗಳು ಮುಚ್ಚಿವೆ. 

ಸ್ವಾತಂತ್ರ್ಯ ದಿನಾಚರಣೆಯ ನಂತರ ಮಾತ್ರವೇ  ಶಾಲಾ ಮತ್ತು ಕಾಲೇಜುಗಳು ಪುನರಾರಂಭಗೊಳ್ಳಲಿವೆ  ಎಂದು ಜಿಲ್ಲಾ ಆಡಳಿತದ ಮೂಲಗಳು ಹೇಳಿವೆ. 

ಜಮ್ಮು ವಿಶ್ವವಿದ್ಯಾಲಯವನ್ನು ಮುಚ್ಚಲಾಗಿದ್ದು,  ವಾಣಿಜ್ಯ ಸಾರಿಗೆ ಸಂಚಾರ  ಸ್ಥಗಿತಗೊಂಡಿದೆ,  ಕಾರುಗಳು, ದ್ವಿಚಕ್ರವಾಹನಗಳು ಸೇರಿದಂತೆ  ಖಾಸಗಿ ವಾಹನಗಳು ರಸ್ತೆಗಳಲ್ಲಿ ಸಂಚರಿಸುತ್ತಿವೆ. 

ವದಂತಿ ಹಬ್ಬಿಸುವುದನ್ನು ತಡೆಗಟ್ಟಲು ಕಳೆದ ಸೋಮವಾರದಿಂದ ರಾಜ್ಯದಲ್ಲಿ ಕಡಿತ ಗೊಳಿಸಲಾಗಿರುವ  ಮೊಬೈಲ್, ಇಂಟರ್ ನೆಟ್ ಸೇವೆ ಇನ್ನೂ ಆರಂಭಗೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟಾರೆ  ಪರಿಸ್ಥಿತಿ ಶಾಂತಿಯುತವಾಗಿ ಮುಂದುವರಿದಿದೆ.  

ಜಮ್ಮು ವಲಯದ ಯಾವುದೇ ಭಾಗದಲ್ಲಿ ಅಹಿತಕರಘಟನೆ ನಡೆದಿರುವ ಬಗ್ಗೆ  ವರದಿಯಾಗಿಲ್ಲ.