ಓಡೋಡಿ ಬಂದ ಪ್ರೇಯಸಿಗೆ ತಾಳಿ ಕಟ್ಟಿದ ಪ್ರೇಮಿ

ಚಿತ್ರದುರ್ಗ :    ಇದು ಥೇಟ್ ಸಿನಿಮಾದಲ್ಲಿ ಬರುವ ದೃಶ್ಯದ ರೀತಿ. ಚಿತ್ರದಲ್ಲಿ ನಾಯಕ-ನಾಯಕಿ ಪ್ರೀತಿಗೆ ಮನೆಯವರು ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದಾಗ ನಾಯಕಿ ಓಡಿ ಬರುತ್ತಾಳೆ, ನಾಯಕ ಆಕೆಯ ಕುತ್ತಿಗೆಗೆ ತಾಳಿ ಕಟ್ಟುತ್ತಾನೆ. ಇಂತಹ ದೃಶ್ಯ ಹಲವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಇಂತಹದ್ದೊಂದು ಘಟನೆ ನಿಜ ಜೀವನದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೀಗೆಹಟ್ಟಿ ಎಂಬ ಗ್ರಾಮದಲ್ಲಿ ಕುರಿಗಾಹಿ ಯುವಕ ಅರುಣ್ ಮತ್ತು ಅದೇ ಊರಿನ ಎಂ.ಎ ಪದವೀಧರೆ ಅಮೃತಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಹುಡುಗಿಯ ಮನೆಯವರ ತೀವ್ರ ವಿರೋಧವಿತ್ತು. ಆಕೆಗೆ ಬೇರೊಬ್ಬ ಹುಡುಗನ ಜೊತೆ ಮದುವೆ ಮಾಡಿಸಲು ಮನೆಯವರು ನಿಶ್ಚಯ ಮಾಡಿಕೊಂಡಿದ್ದರು. 

ಈ ವಿಷಯವನ್ನು ಅಮೃತಾ ಅರುಣ್ ಗೆ ಹೇಳಿ ನಾಳೆ ಬೆಳಗ್ಗೆ ನಿನ್ನ ಬಳಿ ಬರುತ್ತೇನೆ ಎಂದು ಹೇಳಿದ್ದಾಳೆ. ತನ್ನ ಪ್ರಿಯತಮೆ ಬರುವಾಗ ತಾಳಿ ಕೈಯಲ್ಲಿ ಹಿಡಿದು ಸಿದ್ದವಾಗಿ ನಿಂತಿದ್ದ ಅರುಣ್ ಅಮೃತಾ ಓಡೋಡಿ ಬರುತ್ತಿದ್ದಂತೆ ಹಿಂದಿನಿಂದ ಎಲ್ಲಿ ಆಕೆಯ ಮನೆಯವರು ಬಂದು ಇನ್ನೇನು ಎಡವಟ್ಟು ಮಾಡಿಬಿಡುತ್ತಾರೋ ಎಂದು ಆತಂಕದಿಂದ ತಾಳಿ ಕಟ್ಟಿಯೇ ಬಿಟ್ಟಿದ್ದಾನೆ. 

ಮನೆಯ ಪಕ್ಕ ಅರುಣ್ ಕುರಿ ಮೇಯಿಸುವ ಸ್ಥಳದಲ್ಲಿಯೇ ಹುಡುಗಿಗೆ ತಾಳಿ ಕಟ್ಟಿದ್ದಾನೆ. ತಾನು ಅಮೃತಾಳನ್ನು ಮದುವೆಯಾಗಿದ್ದೇನೆ ಎಂದು ಹೇಳುವುದಕ್ಕೆ ಸಾಕ್ಷಿಯಾಗಿರಲೆಂದು ತನ್ನ ತಮ್ಮನಲ್ಲಿ ತಾಳಿ ಕಟ್ಟುತ್ತಿರುವುದನ್ನು ವಿಡಿಯೊ ಮಾಡುವಂತೆ ಅರುಣ್ ಹೇಳಿದ್ದ. ಅದನ್ನು ಅರುಣ್ ನ ತಮ್ಮ ಟಿಕ್ ಟಾಕ್ ಆಪ್ ನಲ್ಲಿ ಅಪ್ ಲೋಡ್ ಮಾಡಿಬಿಟ್ಟಿದ್ದ. ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ ಮಾಧ್ಯಮಗಳಿಗೆ ಸಿಕ್ಕಿದೆ.  

ಹುಡುಗಿ ಅಮೃತಾ ಕಡೆಯವರು ಮನೆ ಬಳಿ ಬಂದು ಗಲಾಟೆ ಮಾಡಬಹುದು, ತಮಗೆ ಭದ್ರತೆ ನೀಡಬೇಕು ಎಂದು ಅರುಣ್ ಪೊಲೀಸರ ಮೊರೆ ಹೋಗಿದ್ದಾನೆ.