ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ: ಸಂತೋಷ ಬಂಡೆ

Nutritious food is essential for good health: Santosh Bhade

ಇಂಡಿ 16: ದೈನಂದಿನ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ರಕ್ತಹೀನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸೋಮವಾರದಂದು ’ರಕ್ತಹೀನತೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ’ವನ್ನು ಉದ್ಧೇಶಿಸಿ ಮಾತನಾಡಿದರು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣುಗಳಂತಹ ಆಹಾರ ಸೇವನೆಯಿಂದ ದೇಹಕ್ಕೆ ಹೇರಳವಾಗಿ ಕಬ್ಬಿಣಾಂಶ ದೊರೆಯುತ್ತದೆ.ಆಗ ರಕ್ತಹೀನತೆ ಮುಕ್ತವಾಗಿ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,  ರಕ್ತಹೀನತೆಗೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆದಾಗನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಮತ್ತು ಉಸಿರಾಟದಲ್ಲಿ ಸಮಸ್ಯೆ ಕಾಣುವುದು. ಹಾಗಾಗಿ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.  

ಶಿಕ್ಷಕರಾದ ಎಸ್ ಪಿ ಪೂಜಾರಿ, ಅಲ್ಫಿಯಾ ಅಂಗಡಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಯಿತು.