ಬೈಲಹೊಂಗಲ 03: ಗ್ರಾಮೀಣ ಜನರ ಅಪೌಷ್ಠಿಕತೆ ನಿವಾರಣೆಗೆ ಪೋಷಣಾ ಅಭಿಯಾನವು ಪೂರಕವಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಅವರು ಸೋಮವಾರ ತಹಸೀಲ್ದಾರ ಸಭಾಭವನದಲ್ಲಿ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶುಅಭಿವೃದ್ದಿ ಯೋಜನೆ, ತಾಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುರಸಭೆ ಇವುರುಗಳ ಸಂಯುಕ್ತ ಆಶ್ರಯದಲ್ಲಿ ಪೋಷಣಾ ಮಾಸಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರವು ಅಪೌಷ್ಠಿಕತೆಯ ನಿವಾರಣೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮುಖಾಂತರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಗ್ರಾಮೀಣ ಪ್ರದೇಶದ ಜನರು ಇದರ ಸದುಪಯೋಗ ಪಡೆದುಕೊಂಡು ಶಾರೀರಿಕ ಸಂಪತ್ತನ್ನು ಸದೃಡಗೊಳಿಸಬೇಕು ಎಂದರು. ಧಾನ್ಯ, ತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳು ಸೇವಿಸಿ ಅಪೌಷ್ಠಿಕತೆಯಿಂದ ಮುಕ್ತರಾಗಲು ಸಲಹೆ ನೀಡಿದರು.
ಜಿಪಂ.ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ, ನಾವು ವಾಸಿಸುವ ಪರಿಸರವನ್ನು ಅತ್ಯಂತ ಸ್ವಚ್ಚತೆಯಿಂದ ಕಾಪಾಡಬೇಕು. ಶುಚಿತ್ವ ಇಲ್ಲದ ಕಾರಣ ಜಂಕ್ ಪುಡ್ ಮತ್ತು ಬೇಕರಿ ತಿನಿಸುಗಳನ್ನು ಹೆಚ್ಚಾಗಿ ಸೇವಿಸುವದರಿಂದ ಮಕ್ಕಳಲ್ಲಿ ಕಬ್ಬಿಣಾಂಶ ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಕಾರಣವಾಗಿದೆ. ಇದರಿಂದ ಜಂತುಹುಳು ಭಾದೆ, ರಕ್ತಹೀನತೆಗೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದರಿಂದ ಹೊರಬರಲು ಪೌಷ್ಠಿಕಾಂಶ ಆಹಾರ ಸೇವನೆ ಮಾಡುವುದು ಅತೀ ಅವಶ್ಯವಾಗಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ ಉಪನ್ಯಾಸ ನೀಡಿ ಮಾತನಾಡಿ, ಮಗುವಿನ ಆರೈಕೆ ಹಾಗೂ ತಾಯಿಯ ಪೋಷಣೆಗೆ ಸಂಬಂಧಿಸಿದ ಪೌಷ್ಠಿಕಾಂಶಗಳ ಬಗ್ಗೆ ಮಾರ್ಮಿಕವಾಗಿ ವಿವರಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಿರೂಪಣಾಧಿಕಾರಿ ಎಸ್.ಎಮ್.ಹಂಜಿ ಮಾತನಾಡಿ, ಇಲಾಖೆಯ ಯೋಜನೆ, ಹೆಣ್ಣು ಮಕ್ಕಳ, ತಾಯಂದಿರ ಪೌಷ್ಠಿಕತೆ ಬಗ್ಗೆ ಪೋಷಣಾ ಅಭಿಯಾನದ ಕುರಿತು ಸಮಗ್ರವಾಗಿ ಮಾಹಿತಿ ವಿವರಿಸಿದರು.
ತಾಪಂ. ಅಧ್ಯಕ್ಷೆ ನೀಲವ್ವಾ ಫಕ್ಕೀರನ್ನವರ ಅಧ್ಯಕ್ಷತೆ ವಹಿಸಿ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯ ನಡೆಸಿದರು. ವೇದಿಕೆ ಮೇಲೆ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಸೀಲ್ದಾರ ಡಾ.ದೊಡ್ಡಪ್ಪ ಹೂಗಾರ, ತಾಪಂ.ಇಓ ಸಮೀರ ಮುಲ್ಲಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ, ನಿವೃತ್ತ ಶಿಶು ಅಭಿವೃದ್ದಿ ಅಧಿಕಾರಿ ಎ.ಎಸ್.ಮರೀಕಟ್ಟಿ ಮುಂತಾದವರು ಇದ್ದರು.
ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು. ವಯೋ ನಿವೃತ್ತಿ ಹೊಂದಿದ ಜಿ.ಆಯ್.ಮುಲ್ಲಾ ಅವರನ್ನು ಸತ್ಕರಿಸಿ ಬೀಳ್ಕೊಡಲಾಯಿತು.
ನೂರಾರು ಆಶಾ ಕಾರ್ಯಕರ್ತೆಯರು ಇದ್ದರು. ಮೇಲ್ವಿಚಾರಕಿ ಸುವರ್ಣಾ ಕುರಬೇಟ್ ಪ್ರಾರ್ಥಿಸಿದರು. ಕಿತ್ತೂರ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರಿಂದ ನಾಡಗೀತೆ, ಶಿಶು ಅಭಿವೃದ್ದಿ ಅಧಿಕಾರಿ ಮಹಾಂತೇಶ ಭಜಂತ್ರಿ ಸ್ವಾಗತಿಸಿದರು. ಮೇಲ್ವಿಚಾರಕಿ ಗೀತಾ ಸುರಕೋಡ, ರೇಣುಕಾ ಸಂಕ್ಲಿಪೂರ ನಿರೂಪಿಸಿದರು. ಮಹಾದೇವಿ ಕರೆಪ್ಪನ್ನವರ ವಂದಿಸಿದರು.