ಲೋಕದರ್ಶನ ವರದಿ
ರಾಯಬಾಗ 24: ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರು ಹೊರಬರುತ್ತಿದ್ದಂತೆ, ಮತ್ತೇ ಭಾರಿ ಮಳೆಯಿಂದ ದಿಗ್ಗೇವಾಡಿ ಗ್ರಾಮಸ್ಥರು ತತ್ತರಿಸುವಂತಾಗಿದೆ. ಗ್ರಾಮಸ್ಥರು ಇದಾವುದಕ್ಕೂ ಹೆದರದೇ ಧೈರ್ಯದಿಂದ ಇರಬೇಕು, ತಮ್ಮೊಂದಿಗೆ ಸದಾತಾವು ಇರುವುದಾಗಿ ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಗುರುವಾರ ತಾಲೂಕಿನ ದಿಗ್ಗೇವಾಡಿ ಗ್ರಾಮದ ಎಸ್ಸಿ ಕಾಲಿನಿಗೆ ಭೇಟಿ ನೀಡಿ, ಮಳೆಯಲ್ಲಿ ಮುಳಗಿರುವ ಮನೆಗಳನ್ನು ವಿಕ್ಷೀಸಿ, ಅಂಬೇಡ್ಕರ್ ಭವನದಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿರುವ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸರಕಾರದ ಎಲ್ಲ ಸೌಲಭ್ಯಗಳನ್ನು ಮಳೆ ಸಂತ್ರಸ್ತರಿಗೆ ತಲುಪಿಸುವಂತೆ ತಹಶೀಲ್ದಾರರವರಿಗೆ ಸೂಚಿಸಿದರು.
ತಹಶೀಲ್ದಾರ ಡಿ.ಎಚ್.ಕೋಮರ ಮಾತನಾಡಿ, ಸರಕಾರ ಜೀವನಾಂಶಕ ವಸ್ತುಗಳನ್ನು ಖರೀದಿಸಲು ತಾತ್ಕಾಲಿಕ ಪರಿಹಾರವಾಗಿ ಹಣ ನೀಡುತ್ತಿದ್ದು, ಅದು ಸಂತ್ರಸ್ತ ಕುಟುಂಬದ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಸಲ ಮಳೆಯಾದಾಗ ಎಸ್ಸಿ ಕಾಲಿನಿಯಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗುತ್ತಿದೆ. ಕಾರಣಇಲ್ಲಿನ ಎಸ್ಸಿ ಕಾಲಿನಿಯನ್ನು ಶಾಶ್ವತವಾಗಿ ಬೇರೆಡೆ ಸ್ಥಳಾಂತರಿಸಬೇಕೆಂದು ಅಲ್ಲಿನ ಸ್ಥಳೀಯ ಮುಖಂಡ ಶ್ರವಣ ಕಾಂಬಳೆ ಮತ್ತು ಅಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಾಗ, ಇದಕ್ಕೆಕೂಡಲೇ ಸ್ಪಂದಿಸಿದ ಶಾಸಕರು, ಸರಕಾರಿಜಾಗ ಇರುವುದರ ಬಗ್ಗೆ ಮಾಹಿತಿ ನೀಡಿದರೆ, ಇದರ ಬಗ್ಗೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ಹೊದಿಕೆಗಳನ್ನು ವಿತರಿಸಲಾಯಿತು. ಗ್ರಾಮದ ಎಸ್ಸಿ ಕಾಲಿನಿ, ಕುರುಬರಗಲ್ಲಿ ಮತ್ತು ಡೋಣವಾಡೆ ಗಲ್ಲಿಗಳಲ್ಲಿನ ಸುಮಾರು 100 ಕ್ಕಿಂತ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿರುವುದಾಗಿ ಪಿಡಿಒ ತಿಳಿಸಿದರು.
ತಹಶೀಲ್ದಾರ ಡಿ.ಎಚ್.ಕೋಮರ, ಸದಾಶಿವ ಘೋರ್ಪಡೆ, ಬಸವರಾಜ ಡೋಣವಾಡೆ, ವಜ್ರಮುನಿ ಕಾಂಬಳೆ, ಗಿರೀಶ ಪಾಟೀಲ, ದಿಲೀಪ ಜಮಾದಾರ, ಶ್ರವಣ ಕಾಂಬಳೆ, ನೋಡಲ ಅಧಿಕಾರಿ ಎಸ್.ಆರ್.ಮಾಂಗ, ಪಿಡಿಒ ಮಂಜುನಾಥ ಕಂಠಿಕಾರ, ಕಡಾಳೆ ಭೋಲಾ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.