ಬೆಂಗಳೂರು, ಜ.9 ಇಂಗ್ಲೀಷ್ ಮಾಧ್ಯಮ ಮೇಲೆ ಪೋಷಕರಿಗೆ ವ್ಯಾಮೋಹ ಹೆಚ್ಚಾಗಿದೆ. ಆದರೆ, ಇಂಗ್ಲಿಷ್ ಓದಿದ ಎಲ್ಲರೂ ಉದ್ಯೋಗಸ್ಥರೇ ಎನ್ನುವ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ನಗರದ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ, ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಾಲಾ ಪಂಚಾಂಗ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂಗ್ಲೀಷ್ ನಲ್ಲಿಯೇ ಎಲ್ಲವೂ ಸಾಧ್ಯ ಎನ್ನುವ ಭಾವನೆ ಶಾಲಾ ಮಕ್ಕಳ ಪೋಷಕರಲ್ಲಿ ಬೆಳೆಯುತ್ತಿದೆ. ಇದರಿಂದಲೇ, ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಈ ಬಗ್ಗೆ ಜಾಗೃತಿ ಮೂಡಿಸಬೇಕು. ಜತೆಗೆ, ಸರ್ಕಾರಿ ಶಾಲೆಗಳಲ್ಲಿ ಸಾಧನೆ ಮಾಡಿದವರನ್ನು ಪೋಷಕರಿಗೆ ಪರಿಚಯ ಮಾಡಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಶಾಲೆಗಳು ಆರಂಭಕ್ಕೂ ಮುನ್ನವೇ, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಒಂದು ವೇಳೆ, ಖಾಯಂ ಅಲ್ಲದಿದ್ದರೂ, ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳ ಪಠ್ಯಕ್ಕೆ ಅಡೆತಡೆಗಳು ಆಗದಂತೆ ನೋಡಿಕೊಳ್ಳಬೇಕು. ಆಗ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಂದ ಭರ್ತಿ ಆಗಲಿದೆ ಎಂದು ಕಾಗೇರಿ ನುಡಿದರು.
ಶಿಕ್ಷಕರು ಮಕ್ಕಳಿಗೆ ಬರೀ ಪಠ್ಯ ಬೋಧನೆ ಮಾಡುವ ಜೊತೆಯಲ್ಲಿ, ಜೀವನದಲ್ಲಿ ಬೇಕಿರುವ ಆದರ್ಶ, ರಾಷ್ಟ್ರಭಕ್ತಿ, ದೇಶ ಕಟ್ಟುವ ವಿಷಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು. ಇದರಿಂದ, ವಿದ್ಯಾರ್ಥಿಗಳ ಮನೋ ಜ್ಞಾನ ಹೆಚ್ಚಾಗಲಿದೆ ಎಂದು ಅವರು ಸಲಹೆ ಮಾಡಿದರು.
ಶಿಕ್ಷಕರ ಬೇಡಿಕೆಗಳನ್ನು ಶಾಸನ ಸಭೆಗಳ ಮೂಲಕ ಶಿಕ್ಷಣ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ತಲುಪಿಸುವ ಕೆಲಸ ಮಾಡಲಾಗುವುದು. ನಾನು ಸಹ ನಿಮ್ಮ ದನಿಯಾಗಿದ್ದೇನೆ. ನನ್ನ ಸ್ಥಾನದಲ್ಲಿ ಕುಳಿತು ಹೇಳುತ್ತೇನೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಸರ್ಕಾರ ಉತ್ತಮವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ವೈ.ಎ.ನಾರಾಯಣಸ್ವಾಮಿ, ಪುಟ್ಟಣ್ಣ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಿ, ಫೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಬೇಡಿಕೆಗಳೇನು: 7 ತರಗತಿ ಪಬ್ಲಿಕ್ ಪರೀಕ್ಷೆ ಯನ್ನು ಈ ವರ್ಷ ಕೈಬಿಡಬೇಕು
ಪ್ರಾಥಮಿಕ ಶಾಲೆಗಳ ಹಾಲಿ ಪದವೀಧರರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ (ವೃಂದ ಮತ್ತು ನೇಮಕಾತಿ ನಿಮಯ ಬದಲಾಯಿಸಿ) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು
*ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು
* ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು
* ಹೆಚ್ಚುವರಿ ಶಿಕ್ಷಕರ ವಿಚಾರದಲ್ಲಿನ ನ್ಯೂನತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ನಿಯೋಜಿಸಬೇಕು.
*ವಜಾಗೊಂಡ ಗ್ರಾಮೀಣ ಕೃಪಾಂಕ ಶಿಕ್ಷಕರ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆಥರ್ಿಕ ಹಾಗೂ ಇನ್ನಿತರ ಸೌಲಭ್ಯ ನೀಡಬೇಕು.