ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕಾನೂನು ಭಂಗಕ್ಕೆ ಅವಕಾಶವಿಲ್ಲ: ಪೊಲೀಸರ ಎಚ್ಚರಿಕೆ

ಬೆಂಗಳೂರು, ನ 10 :        ಹದಿನೈದು ಮಂದಿ ಅನರ್ಹ ಶಾಸಕರಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, ಸೋಮವಾರದಿಂದ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸ್ಫೋಟಕ ವಸ್ತಗಳನ್ನು ಸಿಡಿಸುವುದು, ಮೆರವಣಿಗೆ ನಡೆಸುವಂತಹ ಪ್ರಚೋದನಾತ್ಮಕ ಚಟುವಟಿಕೆಯನ್ನು ಗೃಹ ಇಲಾಖೆ ನಿಷೇಧಿಸಿ ಆದೇಶ ಹೊರಡಿಸಿದೆ.  ಸೋಮವಾರದಿಂದ ಇದೇ 18ರ ವರೆಗೆ ನಾಮಪತ್ರ ಸಲ್ಲಿಸಲು ಸಲ್ಲಿಸಲು ಅವಕಾಶವಿದ್ದು, ಉಮೇದುವಾರಿಕೆ ಸಲ್ಲಿಸುವಾಗ ಶಾಂತಿ, ಸಂಯಮ ಕಾಪಾಡುವಂತೆ ಸೂತ್ತೊಲೆ ಹೊರಡಿಸಲಾಗಿದೆ.  ನಾಮಪತ್ರ ಸಲ್ಲಿಸುವ ಸಂದರ್ಭಗಳಲ್ಲಿ ಆಯಾ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಗಳಿರುವುದರಿಂದ, ರಸ್ತೆತಡೆ, ಮೆರವಣಿಗೆ, ಪ್ರತಿಭಟನೆ ಮೊದಲಾದ ಚಟುವಟಿಕೆಗಳು ನಡೆಯುವ ಸಂಭವವಿರುತ್ತದೆ. ಇದರಿಂದಾಗಿ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗಿ ಸರ್ಕಾರಿ ಕಛೇರಿಯ ಕಾರ್ಯಕಲಾಪಗಳಿಗೆ ಅಡಚಣೆಯಾದ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.   ಕೆಲವು ದುಷ್ಕರ್ಮಿಗಳು ಮತ್ತು ಸಮಾಜಘಾತುಕ ವ್ಯಕ್ತಿಗಳು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವ, ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆಗಳಿರುವುದಾಗಿ ಗುಪ್ತವಾರ್ತಿ ವರದಿಯಿಂದ ತಿಳಿದುಬಂದಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗಗಳ ಉಪ ಪೊಲೀಸ್ ಆಯುಕ್ತರು, ಬಿ.ಬಿ.ಎಂ.ಪಿ. ಆಯುಕ್ತರು ಮತ್ತು ವಿಶೇಷ ಆಯುಕ್ತರುಗಳೊಂದಿಗೆ ಚರ್ಚೆ ನಡೆಸಿದ ನಂತರ ಗುಪ್ತದಳ ವರದಿಯಲ್ಲಿ ಸತ್ಯಾಂಶವಿದೆ ಎಂದು ಖಚಿತಪಡಿಸಿಕೊಂಡಿರುವುದಾಗಿಯೂ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.   ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ನಾಮಪತ್ರ ಸಲ್ಲಿಕೆ ಕಛೇರಿಗಳ ಬಳಿ ಕಾನೂನು ಭಂಗವುಂಟುಮಾಡುವ ಉದ್ದೇಶದಿಂದ 5 ಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದು, ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ,  ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟುಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.  ಯಾವುದೇ ಸಂರಕ್ಷಾರ್ಹ ಪದಾರ್ಥ ಅಥವಾ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳನ್ನು ಒಯ್ಯುವ ಇಲ್ಲವೆ ಶೇಖರಿಸುವುದನ್ನು ಮಾಡಬಾರದು. ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವ, ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ನಾಮ ಪತ್ರ ಸಲ್ಲಿಸುವ ಕಛೇರಿಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಬಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ಪ್ರದಶರ್ಿಸುವುದನ್ನು ಸಹ ನಿಷೇಧಿಸಿದ್ದಾರೆ.