ಯಾವ ಆಸ್ತಿಯೂ ಆರೋಗ್ಯಕ್ಕೆ ಸಮಾನವಲ್ಲ: ಚೋಳನ್

ಧಾರವಾಡ .01: ಉತ್ತಮ ಆರೋಗ್ಯದಂತ ಸಂಪತ್ತು ಮತ್ತೊಂದಿಲ್ಲ. ನಾವು ಜೀವನದಲ್ಲಿ ಗಳಿಸಿದ ಮತ್ತು ಗಳಿಸುವ ಯಾವ ಆಸ್ತಿಯೂ ಆರೋಗ್ಯಕ್ಕೆ ಸಮಾನವಲ್ಲ. ನಮ್ಮ ಆರೋಗ್ಯವೇ ನಮ್ಮ ಭಾಗ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಅವರು ಇಂದು ಬೆಳಿಗ್ಗೆ ಆಲೂರು ವೆಂಕಟರಾವ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡಕ್ರಾಸ್ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಡಾ.ಆರ್.ಬಿ.ಪಾಟೀಲ ಕ್ಯಾನ್ಸರ್ ಆಸ್ಪತ್ರೆ ಮತ್ತು ಡಾ.ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಕೆಲಸದ ಒತ್ತಡ, ನಿರಂತರ ಕೆಲಸ ಮತ್ತು ಇತರ ಕಾರಣಗಳಿಂದ  ಆರೋಗ್ಯದ ಕಡೆಗೆ ಅಧಿಕಾರಿ ಮತ್ತು ಸಿಬ್ಬಂದಿಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವದಿಲ್ಲ. ಒಂದು ಹಂತದ ವಯಸ್ಸು ದಾಟಿದ ಮೇಲೆ  ಥೈರೈಡ್, ಕ್ಯಾನ್ಸರ್, ಶುಗರ್, ಬಿ.ಪಿ ಮುಂತಾದವು ಎಲ್ಲರಲ್ಲೂ ಸಾಮಾನ್ಯವಾಗಿ ಕಾಣಿಸುತ್ತವೆ. ಮುಂಜಾಗೃತೆ ಹಾಗೂ ಪ್ರತಿ ವರ್ಷ ಸಂಪೂರ್ಣ ಆರೋಗ್ಯ ತಪಾಸಣೆಯಿಂದ ಎಲ್ಲ ರೋಗಗಳಿಂದ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.

 ನಮ್ಮ ನಮ್ಮ ಆರೋಗ್ಯ ಸಮಸ್ಯೆಗಳತ್ತ ಗಮನ ಹರಿಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ವಯಕ್ತಿಕ ಕಾಳಜಿ  ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೆಡ್ಕ್ರಾಸ್ ಸಂಸ್ಥೆ ಧಾರವಾಡ ಜಿಲ್ಲಾ ಅಧ್ಯಕ್ಷ  ಡಾ.ವಿ.ಡಿ.ಕಪರ್ೂರಮಠ ಅವರು ವಿವಿಧ ಆರೋಗ್ಯ ಸಮಸ್ಯೆ ಮತ್ತು ರಕ್ತದಾನದ ಮಹತ್ವ  ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಗೀರಿಧರ ಕುಕನೂರ, ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಕ್ಯಾನ್ಸರ್ ಆಸ್ಪತ್ರೆಯ ಡಾ.ಹಳ್ಳಿಕೇರಿ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಸ್ವಾಗತಿಸಿ, ನಿರೂಪಿಸಿದರು. ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ವಂದಿಸಿದರು.

ಶಿಬಿರದಲ್ಲಿ ಮತ್ತು ವಿವಿಧ ತಜ್ಞ ವೈದ್ಯರಾದ ಡಾ. ಪ್ರಭು, ಡಾ.ಕವಿತಾ, ಡಾ. ಗೌರಿ ಬೆಲ್ಲದ, ಡಾ.ಪ್ರತೀಕ ಜೈನ, ಡಾ. ಶ್ರೀನಿವಾಸ, ಡಾ.ನೀತಾ ಸಾಂಬ್ರಾಣಿ, ಡಾ.ಪ್ರತಿಭಾ ಸೇರಿದಂತೆ ಜಿಲ್ಲಾ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆರೋಗ್ಯ ತಪಾಸನೆ ಮತ್ತು ರಕ್ತ ಸಂಗ್ರಹ ಕಾರ್ಯ ಮಾಡಿದರು.

 ಶಿಬಿರದಲ್ಲಿ ಧಾರವಾಡ ತಹಶೀಲ್ದಾರ ಕಚೇರಿಯ ಗ್ರೇಡ್-2 ತಹಶೀಲ್ದಾರರಾದ ಪ್ರದೀಪ ಪಾಟೀಲ ಸೇರಿದಂತೆ 40ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳು ರಕ್ತದಾನ ಮಾಡಿದರು. ಜಿಲ್ಲಾಧಿಕಾರಗಳ ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ಧಾರವಾಡ ತಹಸಿಲ್ದಾರ ವ್ಯಾಪ್ತಿಯ ಎಲ್ಲ ಕಂದಾಯ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿ, ಕಣ್ಣು ತಪಾಸಣೆ, ರಕ್ತ ತಪಾಸಣೆ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.