ನವದೆಹಲಿ 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸರ್ಕಾರ ಅಮೆರಿಕದ ವಸ್ತುಗಳ ಮೇಲಿನ "ತಮ್ಮ ಸುಂಕ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರ್ಕಾರ ಸುಂಕ ಕಡಿತ ವಿಚಾರವಾಗಿ ಮಾತು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.
ದುಬಾರಿ ಸುಂಕದಿಂದಾಗಿ ಭಾರತಕ್ಕೆ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ, ಇದು ಬಹುತೇಕ ನಿರ್ಬಂಧಿತವಾಗಿದೆ. ಭಾರತ ಸರ್ಕಾರ ಈಗ ತಮ್ಮ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಭಾರತ ಸುಂಕ ನೀತಿ ಬಯಲಾಗಿದ್ದು, ಇದೀಗ ಅವರು ಸುಂಕ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು.
ಇನ್ನು ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಸಂಸತ್ ಸದನದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ವಿಪಕ್ಷಗಳ ನಾಯಕರು ಸುಂಕ ಕಡಿತದ ವಿಚಾರವಾಗಿ ಭಾರತ ಅಮೆರಿಕ ಎದುರು ಮಂಡಿಯೂರಿದೆ ಎಂದು ಟೀಕಿಸಿದರೆ ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ಸುಂಕ ಕಡಿತ ವಿಚಾರವಾಗಿ ಅಮೆರಿಕಕ್ಕೆ ಯಾವುದೇ ಮಾತುಕೊಟ್ಟಿಲ್ಲ ಎಂದು ಹೇಳಿದೆ.
ಅಂತೆಯೇ ಅಮೆರಿಕದ ಅಧ್ಯಕ್ಷರು ಪದೇ ಪದೇ ಎತ್ತುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಸೆಪ್ಟೆಂಬರ್ ವರೆಗೆ ಸಮಯ ಕೇಳಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಭಾರತದ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ತ್ವಾಲ್ಅವರು, ಭಾರತ ಮತ್ತು ಅಮೆರಿಕಗಳು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದತ್ತ ಕೆಲಸ ಮಾಡುತ್ತಿವೆ, ಕೇವಲ ತಕ್ಷಣದ ಸುಂಕ ಹೊಂದಾಣಿಕೆಗಳನ್ನು ಪಡೆಯುವ ಬದಲು ದೀರ್ಘಾವಧಿಯ ವ್ಯಾಪಾರ ಸಹಕಾರದ ಮೇಲೆ ಸರ್ಕಾರ ಗಮನ ಕೇಂದ್ರೀಕರಿಸುತ್ತಿವೆ ಎಂದು ಹೇಳಿದರು.
ಸುಂಕ ವಿಚಾರವಾಗಿ ಜಾಗತಿಕವಾಗಿ ಕದನಕ್ಕೇ ಇಳಿದಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ದೇಶಗಳ ವಿರುದ್ಧ ಹೆಚ್ಚಿನ ಸುಂಕದ ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ ಭಾರತದ ವಿರುದ್ಧವೂ ಮಾತನಾಡಿದ್ದ ಟ್ರಂಪ್, ಭಾರತ ಎಷ್ಟು ಸುಂಕ ವಿಧಿಸುತ್ತದೆಯೇ ಅಷ್ಟೇ ಪ್ರಮಾಣದ ಸುಂಕವನ್ನು ಅಮೆರಿಕ ಭಾರತದ ಮೇಲೆ ವಿಧಿಸುತ್ತದೆ ಎಂದು ಹೇಳಿದ್ದರು.