ಕೋಲ್ಕತಾ: ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆಯ ವಿರುದ್ಧ ಕೂಗೆಬ್ಬಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಮತ್ತೆ ಬ್ಯಾಲಟ್ ಪೇಪರ್ ವ್ಯವಸ್ಥೆಗೆ ಆಗ್ರಹಿಸಿದ್ದಾರೆ ಕೋಲ್ಕತಾದಲ್ಲಿ ಭಾನುವಾರ ಹುತಾತ್ಮರ ದಿನದ ಬೃಹತ್ ಸಮಾವೇಶಕ್ಕೆ ಚಾಲನೆಯಿತ್ತು ಮಾತನಾಡಿ, "ನಮಗೆ ವಿದ್ಯುನ್ಮಾನ ಮತಯಂತ್ರದ ವ್ಯವಸ್ಥೆ ಬೇಕಿಲ್ಲ ಹಿಂದಿನ ಬ್ಯಾಲಟ್ ಬಾಕ್ಸ್ ವ್ಯವಸ್ಥೆಯೇ ಬೇಕು" ಎಂದು ಒತ್ತಾಯಿಸಿದರು "ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಪುರಸಭೆ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಬ್ಯಾಲಟ್ ಬಾಕ್ಸ್ ಬಳಕೆಯಾಗಬೇಕು. ವಿದ್ಯುನ್ಮಾನ ಮತಯಂತ್ರದ ಬಳಕೆ ಸೂಕ್ತವಲ್ಲ ಎಂಬ ಕಾರಣಕ್ಕಾಗಿಯೇ ಫ್ರಾನ್ಸ್, ಜಪಾನ್, ನೆದರ್ ಲ್ಯಾಂಡ್ಸ್ ಮತ್ತಿತರ ರಾಷ್ಟ್ರಗಳು ಆ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿವೆ" ಎಂದು ಹೇಳಿದರು. "ಭಾರತೀಯ ಜನತಾ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣವಾದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಹಸ್ಯ ಅಡಗಿದೆಯೇ ಹೊರತು ಇತಿಹಾಸ ಸೃಷ್ಟಿಯಾಗಿಲ್ಲ ಎಂದು ಖಂಡಿಸುವ ಮೂಲಕ ಚುನಾವಣಾ ವ್ಯವಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸಿದರು. ಇದೇ ವೇಳೆ ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ ಮಮತಾ, "ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸುತ್ತಿದೆ, ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಹಾಗೂ ಕುದುರೆ ವ್ಯಾಪಾರದ ಮೂಲಕ ಗೋವಾ, ರಾಜಸ್ಥಾನ, ಕರ್ನಾಟಕ ವಿಧಾನಸಭೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳವನ್ನು ನಾಶ ಮಾಡಲು ಸಾಧ್ಯವಿಲ್ಲ. ವಿದ್ಯಾಸಾಗರ್, ಗಾಂಧೀಜಿಯವರನ್ನು ಮುಟ್ಟಿದರೆ ತಕ್ಕ ಪಾಠ ಕಲಿಸಬೇಕಾದೀತು" ಎಂದು ಗುಡುಗಿದರು. ಇತರ ಪಕ್ಷಗಳ ನಾಯಕರನ್ನು ತನ್ನತ್ತ ಸೆಳೆಯಲು ಬಿಜೆಪಿಯು ಹಣದ ಆಮಿಷ ಒಡ್ಡುತ್ತಿರುವುದು ನಾಚಿಕೆಗೇಡು.
ಓರ್ವ ನಾಯಕ ಬಿಜೆಪಿಗೆ ತೆರಳಿ ಅಲ್ಲಿಂದ ಪುನಃ ಟಿಎಂಸಿಗೆ ಬಂದ ನಂತರವೂ ಮತ್ತೆ ಮತ್ತೆ ಆತನನ್ನು ಸೆಳೆಯಲು ಮುಂದಾಗುವುದು ದುರದೃಷ್ಟಕರ. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ರಾಜ್ಯಸರ್ಕಾರ ಶ್ರಮಿಸಿದೆಯೇ ಹೊರತು ಕೇಂದ್ರ ಸರ್ಕಾರದ ಯಾವ ಪಾಲೂ ಇಲ್ಲ ಎಂದು ಮಮತಾ ಬ್ಯಾನರ್ಜಿ ಟೀಕಿಸಿದರು.
ವಿದ್ಯುನ್ಮಾನ ಮತಯಂತ್ರದ ವ್ಯವಸ್ಥೆಯ ನಂತರ ಬಿಜೆಪಿ ಗೆಲುವು ಕಂಡ ಕಡೆಯಲ್ಲೆಲ್ಲ ಮತಯಂತ್ರದಲ್ಲಿ ದೋಷವಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ . ಆದರೆ ಚುನಾವಣಾ ಆಯೋಗ ಇವಿಎಂ ನಲ್ಲಿ ಯಾವುದೇ ದೋಷವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆದಾಗ್ಯೂ ಬ್ಯಾಲಟ್ ಪೇಪರ್ ವ್ಯವಸ್ಥೆಯ ಪುನರ್ ಸ್ಥಾಪನೆಗೆ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಆಗ್ರಹಿಸಿವೆ.