ಲೋಕದರ್ಶನ ವರದಿ
ನಾವು ಎಷ್ಟೇ ಕಲಿತರು ಕೌಶಲ್ಯ ಬೇಕು - ಸಾಹಿತಿ ಕಾ.ತ. ಚಿಕ್ಕಣ್ಣ
ಕೊಪ್ಪಳ 19: ನಾವು ಎಷ್ಟೇ ಕಲಿತರು ನಮ್ಮಲ್ಲಿ ಕೌಶಲ್ಯ ಇರಬೇಕು ಅದು ನಮ್ಮ ಜೀವನ ರೂಪಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹಿರಿಯ ಸಾಹಿತಿಗಳು ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಹೇಳಿದರು.
ಅವರು ಬುಧವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯರಿಗೆ ಸುಲಭವಾಗಿ ಶಿಕ್ಷಣ ಸಿಗಬೇಕಾದರೆ ವಿಶ್ವವಿದ್ಯಾಲಯಗಳು ಬೇಕು. ವಿಶ್ವವಿದ್ಯಾಲಯಗಳು ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಪರ್ಧೆ, ಪೈಪೋಟಿ ಜೊತೆಗೆ ವಿದ್ಯಾರ್ಥಿಗಳ ಬದುಕನ್ನು ಅರಳಿಸುವ ಶಿಕ್ಷಣ ಕೊಡಬೇಕು. ಕೊಪ್ಪಳ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಹೆಮ್ಮೆಯಿಂದ ಉದ್ಘಾಟಿಸಿದ್ದೇನೆ. ಈ ಭಾಗದಲ್ಲಿ ಬಿಸಿಲು ಹೆಚ್ಚಿದ್ದರು ಸಾಂಸ್ಕೃತಿಕವಾಗಿ ಬಹಳ ಶ್ರೀಮಂತವಾಗಿದೆ ಎಂದು ಹೇಳಿದರು.
ರಾಜಕೀಯ ಇರುವುದು ಸೇವೆಗಾಗಿ ಆದರೆ ಇಂದಿನ ದಿನಮಾನಗಳಲ್ಲಿ ಅದು ಹಿಂದೆ ಸರಿದು ಅಧಿಕಾರ ಮುಂದೆ ಬಂದಿದೆ. ಹೀಗಾದರೆ ಹಸಿ-ಹಸಿಯಾದ ತೀರ್ಮಾನಗಳಾಗುತ್ತವೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಆಗಭಾರದು. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಶಿಕ್ಷಣದ ಮೇಲೆ ನಿಂತಿರುತ್ತದೆ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಡಿ. ಕುಂಬಾರ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿಶ್ವವಿದ್ಯಾಲಯ ಇರುವುದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸ ವಿಶ್ವವಿದ್ಯಾಲಯಗಳನ್ನು ನಡೆಸಿಕೊಂಡು ಹೋಗುವುದು ಸಾಮಾನ್ಯ ಕೆಲಸ ಅಲ್ಲ. ಆದರೂ ಕಳೆದ 2 ವರ್ಷಗಳಿಂದ ಪ್ರೋ. ಬಿ.ಕೆ. ರವಿ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಅವರ ಕಾಳಜಿ ತೋರಿಸುತ್ತದೆ. ಹಿಂದುಳಿದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅವರು ದೃಡ ಸಂಕಲ್ಪಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಜಯಕರ ಎಸ್.ಎಂ ಅವರು ಮಾತನಾಡಿ, ಈ ಭಾಗದ ಬೆಳವಣಿಗೆ ಹಾಗೂ ಪರಿವರ್ತನೆಗೆ ವಿಶ್ವವಿದ್ಯಾಲಯದ ಪಾತ್ರ ಬಹಳ ಮುಖ್ಯ ಇದೆ. ನಮ್ಮ ದೇಶ ಯುವಕರು ಹೆಚ್ಚಿರುವ ದೇಶವಾಗಿದೆ. ಯುವಕರಿಗೆ ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಅವರು ಒಂದು ಒಳ್ಳೆಯ ಉದ್ಯೋಗವನ್ನು ಸೃಷ್ಟಿಸುತ್ತಾರೆ. ಕೊಪ್ಪಳ ವಿಶ್ವವಿದ್ಯಾಲಯ ಇತ್ತಿಚೆಗೆ ಆರಂಭವಾದರು ದೇಶದ ವಿವಿಧ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುನ್ನಡೆಯುತ್ತಿದೆ. ನಮ್ಮ ಬೆಂಗಳೂರು ವಿಶ್ವವಿದ್ಯಾಲಯ ತಮ್ಮೊಂದಿಗೆ ಸದಾ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಕೆ.ರವಿ ಮಾತನಾಡಿ, ಕೊಪ್ಪಳ ವಿಶ್ವವಿದ್ಯಾಲಯ 2 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಮಾಡುತ್ತಿದ್ದೆವೆ. ಕಳೆದ ಎರಡು ವರ್ಷಗಳಿಂದ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದೆವೆ. ಇದಕ್ಕೆ ಕೊಪ್ಪಳದ ಅನೇಕ ಹಿರಿಯ ಚೇತನರು. ಜನಪ್ರತಿನಿಧಿಗಳು. ಜಿಲ್ಲೆಯ ಜನ ಬಂಡೆಯಂತೆ ನಿಂತು ಕೆಲಸ ಮಾಡಲು ನಮಗೆ ಶಕ್ತಿ ಕೊಟ್ಟಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಎಂದರು.
ಈ ಭಾಗದಲ್ಲಿ ಹೆಚ್ಚು ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿಲ್ಲ. ಕೊಪ್ಪಳ ವಿಶ್ವವಿದ್ಯಾಲಯ ಆರಂಭವಾದ ನಂತರ ಹೆಣ್ಣು ಮಕ್ಕಳ ಕಲಿಕೆ ಹೆಚ್ಚಾಗಿದೆ. ಶಿಕ್ಷಣ ಬಲಪಡಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಹುಧರ್ಮ, ಸಂಸ್ಕತಿ, ಭಾಷೆ ಪರಂಪರೆಯ ದೇಶ ನಮ್ಮದು. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಓದುವ ವಿಷಯದಲ್ಲಿ ಆಳವಾದ ಜ್ಞಾನ ಇದ್ದರೆ ನೇಮಕಾತಿ ಆದೇಶ ಪತ್ರ ನಿಮ್ಮ ಮನೆಬಾಗಿಲಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಠಿಣ ಪರಿಶ್ರಮ, ಗುರು ತೋರಿದ ಮಾರ್ಗದಲ್ಲಿ ತಾವು ನಡೆದರೆ ತಮ್ಮ ತಂದೆ-ತಾಯಿಯವರ ಕನಸು ನನಸು ಮಾಡುತ್ತಿರಾ. ವಿಶ್ವವಿದ್ಯಾಲಯಗಳು ಬುದ್ದಿ ಜೀವಿಗಳನ್ನು ಸೃಷ್ಟಿಸುವ ಹಾಗೂ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣದ ಜವಾಬ್ದಾರಿಯುತ ಕೆಲಸ ಮಾಡುತ್ತವೆ. ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಹೊಸ-ಹೊಸ ಕೋರ್ಸುಗಳನ್ನು ಆರಂಭಿಸುತ್ತಿದ್ದೆವೆ. ಸಂಶೋಧನೆಗೂ ಒತ್ತು ನೀಡಲಾಗುತ್ತಿದೆ. ಕೊಪ್ಪಳ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಬೆಳೆಯಲು ಜಿಲ್ಲೆಯ ಜನರ ಬೆಂಬಲ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಶ್ರೀ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಇವರಿಗೆ ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ಗೌರವ ಸನ್ಮಾನ ನೆರವೇರಿಸಲಾಯಿತು. ಪತ್ರಿಕೋದ್ಯಮ ಸಂವಹನ ವಿಭಾಗದ ವಿಧ್ಯಾರ್ಥಿಗಳು ಹೊರತಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆ ಹಾಗೂ ಕೆ.ಯು.ಕೆ. ನ್ಯೂಸ್ ಲೋಗೊ ಗಣ್ಯರಿಂದ ಬಿಡುಗಡೆಗೊಳಿಸಲಾಯಿತು. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ರವಿ ಅವರು ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕೊಪ್ಪಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರದ ಕುಲಪತಿ ಪ್ರೋ. ನಿರಂಜನ ವಾನಳ್ಳಿ. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಕುಲಪತಿ ಪ್ರೋ. ನಾಗೇಶ ವಿ. ಬೆಟ್ಟಕೋಟೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಕುಲಪತಿ ಪ್ರೋ. ಮುನಿರಾಜು ಎಂ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಕುಲಪತಿ ಪ್ರೋ. ಸುರೇಶ ವಿ. ನಾಡಗೌಡರ. ಭಾಷೆ ಮತ್ತು ಸಾಹಿತ್ಯ ಶಾಲೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರಿನ ನಿರ್ದೆಶಕರಾದ ಪ್ರೋ. ಕೆ.ವೈ. ನಾರಾಯಣ ಸ್ವಾಮಿ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಕುಲಸಚಿವರಾದ ಎಸ್.ಎನ್.ರುದ್ರೇಶ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಮೌಲ್ಯಮಾಪನ ಕುಲಸಚಿವರಾದ ಪ್ರೋ. ಎನ್.ಎಂ.ಸಾಲಿ. ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾದ ಪ್ರೋ. ಕೆ.ವಿ. ಪ್ರಸಾದ್. ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು. ಎಲ್ಲಾ ಬೋಧಕ. ಬೋಧಕೇತರ ಸಿಬ್ಬಂದಿಗಳು. ವಿವಿಧ ಕಾಲೇಜುಗಳಿಂದ ಆಗಮಿಸಿದ ಪ್ರಾಂಶುಪಾಲರು. ಸಂಶೋಧನಾ ವಿಧ್ಯಾರ್ಥಿಗಳು. ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.