ಪ್ರಯಾಣಿಕ ವಿಮಾನ ಹಾರಾಟದ ನಿರ್ಧಾರವಾಗಿಲ್ಲ : ಹರ್ ದೀಪ್ ಸಿಂಗ್ ಪುರಿ

ನವದೆಹಲಿ, ಏ 19, ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟ ಪುನರಾರಂಭಿಸುವ ಕುರಿತು ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಿದ ಬಳಿಕವಷ್ಟೇ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಿಸುವಂತೆ ಸಲಹೆ ನೀಡಿದ್ದಾರೆ.ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ವಿಮಾನ ಹಾರಾಟದ ಮೇಲೆ ನಿರ್ಬಂಧ ಹೇರಲಾಗಿದ್ದು ಜೂನ್ 1 ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪುನರಾರಂಭಿಸುವುದಾಗಿ ಏರ್ ಇಂಡಿಯಾ ಸಂಸ್ಥೆ ಶನಿವಾರ ಹೇಳಿದ ನಂತರ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಏರ್ ಇಂಡಿಯಾ ಮುಂದಿನ ತಿಂಗಳ ಅಂದರೆ ಮೇ 4 ರಿಂದ ದೇಶೀಯ ವಿಮಾನಗಳಲ್ಲಿ ಪ್ರಯಾಣಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭಿಸಿತ್ತು ಎಂದೂ ಹೇಳಲಾಗಿದೆ. ಇದೀಗ ಸರ್ಕಾರ ಸ್ಪಷ್ಟನೆ ನೀಡಿದ್ದು ಮುಂದಿನ ಆದೇಶದವರೆಗೂ ಯಾವುದೇ ಪ್ರಯಾಣಿಕ ವಿಮಾನ ಹಾರಾಟಕ್ಕೆ ಅವಕಾಶವಿಲ್ಲ.