ಮೈಸೂರು, ಡಿ.3- ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಚಾರವನ್ನು ಅಲ್ಲಗಳೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಅಂತಹ ಯಾವುದೇ ವಿದ್ಯಮಾನ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ತಗೆ ಡಿಸೆಂಬರ್ 9ರ ಬಳಿಕ ಸಿಹಿ ಹಂಚುತ್ತಾರೆ ಎಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ಸಿಹಿ ಹಂಚುತ್ತಾರೆ ಎಂದರೆ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದರ್ಥ. ಇದನ್ನು ನೀವು ಬೇಕಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಿ ಎಂದು ಪರ್ತಕರ್ತರಿಗೆ ಸಲಹೆ ನೀಡಿದರು.
ಬಿಜೆಪಿಯಷ್ಟೆ ಜೆಡಿಎಸ್ ಸಹ ನಮಗೆ ರಾಜಕೀಯ ವೈರಿ. ನಾವು ಈ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಎರಡು ಪಕ್ಷಗಳು ಈ ಉಪಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ. ಜೆಡಿಎಸ್‌ನೊಂದಿಗೆ ಯಾವುದೇ ಒಳಒಪ್ಪಂದ ಮಾಡಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಂತ್ರಿಗಿರಿಗಾಗಿ ಮತ ಕೇಳುವ ಬಿಜೆಪಿಯ ನಿಲುವು ಸರಿಯಲ್ಲ. ಇದನ್ನು ಜನ ಒಪ್ಪುವುದಿಲ್ಲ. ಅನರ್ಹ ಶಾಸಕರು ದುಡ್ಡಿಗೆ ಮಾರಾಟವಾಗಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಚುನಾಯಿತ ಸರ್ಕಾರ ಬೀಳಿಸಿದವರು ಎಂಬ ಅಪಖ್ಯಾತಿಗೆ ಅವರು ಒಳಗಾಗಿದ್ದು, ಇವರ ಬಗ್ಗೆ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಾಂತರಿಗಳಿಗೆ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಕ್ರಿಕೆಟ್ ನಂತೆ ವೈಟ್ ವಾಶ್ ಆಗುತ್ತಾರೆ ಎಂಬ ಶ್ರೀನಿವಾಸಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಹೋದ ಕಡೆಯಲ್ಲೆಲ್ಲಾ ಜನರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಶ್ರೀನಿವಾಸ್ ಪ್ರಸಾದ್ ಗೆ ಇನ್ನೂ ಬುದ್ದಿಬಂದಿಲ್ಲ. ಬಿಜೆಪಿಗೆ ಸೇರಿದ ಮೇಲೆ ನಂಜನಗೂಡಲ್ಲಿ ಸೋತರು. ಬಿಜೆಪಿ ಸೇರಿರುವುದರಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಆದ್ದರಿಂದ ಅವರ ಹೇಳಿಕೆಗೆಲ್ಲಾ ಉತ್ತರ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಹುಣಸೂರಿನಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಾಕಷ್ಟು ದುಡ್ಡು ಕೊಟ್ಟಿದ್ದಾರೆ. ಅವರ ಬಳಿ ವಿಪರೀತ ದುಡ್ಡಿದೆ. ಹಣದಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಅವರ ಬಳಿಹಣ ಪಡೆದು ಕಾಂಗ್ರೆಸ್ ಗೆ ಜನ ಮತ ಹಾಕುತ್ತಾರೆ. ಇದನ್ನು ಜನರೇ ಹೇಳುತ್ತಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಜನರೇ "ಬಾಂಬೆ ನೋಟು ಕಾಂಗ್ರೆಸ್ ಗೆ ಓಟು" ಎಂಬ ಘೋಷಣೆ ಕೂಗುತ್ತಿದ್ದರು ಎಂದು ಹೇಳಿದರು.
ಮೈಸೂರಿನ ದಟ್ಟಗಳ್ಳಿಯಲ್ಲಿರುವ ನಳಪಾಕ್ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಬೆಳಗ್ಗಿನ ಉಪಹಾರ ಸೇವಿಸಿದರು.ಇಡ್ಲಿ ವಡೆ, ಮಸಾಲೆ ದೋಸೆ ಸವಿದರು. ಸಿದ್ದರಾಮಯ್ಯ ಗೆ ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್,ಮಾಜಿ ಶಾಸಕ ವೆಂಕಟೇಶ್ ಸಾಥ್ ನೀಡಿದರು.