ಲಂಚ ಪಡೆದ ಪೊಲೀಸರ ವಿರುದ್ಧ ಏಕಿಲ್ಲ ಎಸಿಬಿ ತನಿಖೆ

ಬೆಂಗಳೂರು, ಜೂ 21 ; ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಎಲೆಕ್ಟ್ರಾನಿಕ್ ಸಿಟಿ ವಲಯದಲ್ಲಿ ಸರ್ಕಾರಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಿದವರಿಂದ ಪೊಲೀಸರೇ ಲಂಚ ಪಡೆದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿತ್ತು. ಆದರೆ ಲಂಚ ಪಡೆದ ಪೊಲೀಸರ ವಿರುದ್ಧ ತನಿಖೆಗೆ ಗೃಹ ಇಲಾಖೆ ಹಿಂದೇಟು ಹಾಕುತ್ತಿರುವುದು ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಬೇರೆ ಇಲಾಖೆಗಳ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳಲ್ಲಿ ಏಕಾಏಕಿ ಭ್ರಷ್ಟಾಚಾರ ನಿಗ್ರಹದಳ -ಎಸಿಬಿಯಿಂದ ತನಿಖೆ ನಡೆಸುವ ಸರ್ಕಾರ, ಪೊಲೀಸರು ಲಂಚ ಪಡೆದ ಈ ಪ್ರಕರಣದಲ್ಲಿ ಮಾತ್ರ ತನಿಖೆಗೆ ಆದೇಶಿಸದೇ ವ್ಯತಿರಿಕ್ತವಾಗಿ ವರ್ತಿಸುತ್ತಿದೆ. ಅನ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಲಂಚ ಪಡೆದರೆ ತಕ್ಷಣವೇ ಎಸಿಬಿ ತನಿಖೆಗೆ ಆದೇಶ ಮಾಡಲಾಗುತ್ತದೆ. ಆದರೆ ಇದು ಪೊಲೀಸರಿಗೆ ಅನ್ವಯವಾಗುವುದಿಲ್ಲವೇ?. ಪೊಲೀಸರಿಗೆ ಪ್ರತ್ಯೇಕ ಕಾನೂನಿದೆಯೇ  ಎಂಬ ಚರ್ಚೆ ನಡೆಯುತ್ತಿದೆ. ಪೊಲೀಸರು ಲಂಚ ಪಡೆದು ತನಿಖೆಯಿಂದಲೂ ಬಚಾವಾಗಬಹುದು ಎನ್ನುವುದಾದರೆ ಪೊಲೀಸರ ಮೇಲೆ ಸಾರ್ವಜನಿಕರ ವಿಶ್ವಾಸಾರ್ಹತೆ ಕುಗ್ಗುವುದಿಲ್ಲವೆ? ಎನ್ನುವ ಚರ್ಚೆ ಪೊಲೀಸ್ ವಲಯದಲ್ಲಿ ನಡೆಯುತ್ತಿದೆ. 

ಈ ಪ್ರಕರಣವನ್ನು ಎಸಿಬಿ ತನಿಖೆಗೆ ಒಳಪಡಿಸಲು ಮೀನಾಮೇಷ ಎಣಿಸುತ್ತಿದ್ದು, ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಷಡ್ಯಂತ್ರ ಅಡಗಿರುವುದು ಸ್ಪಷ್ಟವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟದ ಮೇಲೆ ಇದ್ದ ನಿರ್ಬಂಧಗಳ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸರಕು ಮತ್ತು ಸೇವಾ ತೆರಿಗೆ – ಜಿ.ಎಸ್.ಟಿ. ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಭಾಸ್ಕರ್, ಸೋಮ ಮತ್ತು ಗೋವಿಂದ ರೆಡ್ಡಿ ಎಂಬುವರನ್ನು ಬಂಧಿಸಲಾಗಿತ್ತು. ನಂತರ ಇವರೆಲ್ಲರನ್ನೂ ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಪೊಲೀಸರನ್ನು ರಕ್ಷಿಸುವ ಹುನ್ನಾರ ಅಡಗಿರುವುದು ಸ್ಪಷ್ಟವಾಗಿದೆ. ಉದ್ಯಮಿ ವಿಶೇಷ್ ಗುಪ್ತ ಎಂಬುವರಿಗೆ ಪ್ರಮುಖ ಆರೋಪಿಗಳಾದ ಭಾಸ್ಕರ್, ಗೋವಿಂದ ರೆಡ್ಡಿ ಮತ್ತು ಸೋಮಾ ಎಂಬುವರು ಮದ್ಯ ಕೊಡಿಸಿದ್ದರು. ಬಳಿಕ ಮದ್ಯ ಸಾಗಾಟ ಮಾಡುತ್ತಿದ್ದಾಗ ಎಸಿಪಿ ವಾಸು ರೆಡ್ಡಿ ದಾಳಿ ನಡೆಸಿ ಇವರೆಲ್ಲರನ್ನೂ ಬಂಧಿಸಿದ್ದರು, ಬಳಿಕ ವಿಶೇಷ್ ಗುಪ್ತಾ ಅವರಿಂದ ವಾಸು ರೆಡ್ಡಿ ಅವರು ಲಂಚ ಪಡೆದಿದ್ದರು. ನೂರಕ್ಕೂ ಹೆಚ್ಚು ಮದ್ಯದ ಬಾಟೆಲ್ ಗಳನ್ನು ಜಿ.ಎಸ್.ಟಿ ವಾಹನದಲ್ಲಿ ಸಾಗಿಸಿದ್ದರು. ಅಲ್ಲದೇ ಇವುಗಳನ್ನು ನಗರದ ವಿವಿಧ ಪ್ರದೇಶಗಳಿಗೆ ಪೂರೈಸಲಾಗುತ್ತಿತ್ತು ಎನ್ನಲಾಗಿದೆ. ಈ ಪ್ರಕರಣದಲ್ಲಿ ಲಂಚ ಪಡೆದ ಆರೋಪದ ಮೇರೆಗೆ ಎಸಿಪಿ ವಾಸು ರೆಡ್ಡಿ   ಅವರನ್ನು ಅಮಾನತು ಮಾಡಲಾಗಿದೆ.  ಲಾಕ್ ಡೌನ್ ಸಂದರ್ಭದಲ್ಲಿ ಉದ್ಯಮಿ ವಿಶೇಷ್ ಗುಪ್ತಾ ಅವರಿಗೆ ಹಿಂಸೆ ನೀಡಿ ಆತನನ್ನು ಅವರ ಮನೆಗೇ ಕರೆದೊಯ್ದು, ಅವರ ತಾಯಿಯ ವಡವೆಗಳನ್ನು ಮಾರಾಟ ಮಾಡಿಸಿ ಲಂಚ ಪಡೆದ ಗಂಭೀರ ಆರೋಪ ಪೊಲೀಸರ ಮೇಲಿದೆ. ಚಲನಚಿತ್ರಗಳಲ್ಲೂ ಲಂಚಕ್ಕಾಗಿ ಇಷ್ಟೊಂದು ಹೀನಾಯವಾಗಿ ಬಿಂಬಿಸುವುದಿಲ್ಲ. ಅಷ್ಟೊಂದು ಕ್ರೂರತನದಿಂಧ ವರ್ತಿಸಲಾಗಿದೆ. ಇಷ್ಟಾದರೂ ಪೊಲೀಸರು ಮತ್ತಿತರ ಆರೋಪಿಗಳ ವಿರುದ್ಧ ಎಸಿಬಿ ತನಿಖೆ ನಡೆಯದಿರುವುದು ತೀವ್ರ ಅಚ್ಚರಿ ಮೂಡಿಸಿದೆ. 

ಇದೊಂಧು ಗಂಭೀರ ಪ್ರಕರಣವಾಗಿದ್ದು, ವಿಪತ್ತು ನಿರ್ವಹಣಾ ಕಾಯ್ದೆ 2005ರ ನಿಯಮಗಳನ್ನು ಉಲ್ಲಂಘಿಸಲಾಗಿದೆ., ಲಾಡ್ ಡೌನ್ ನಿಯಮಗಳನ್ನು ಪಾಲಿಸಬೇಕಾದ ಪೊಲೀಸರೇ ಇವುಗಳನ್ನು ಉಲ್ಲಂಘನೆ ಮಾಡಿರುವುದು ಘೋರ  ಅಪರಾಧವಾಗಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಗೃಹ ಇಲಾಖೆ ಆಗಿಂದಾಗ್ಗೆ ನಿರ್ದೇಶನಗಳನ್ನುನೀಡುತ್ತಲೇ ಬಂದಿದೆ. ಕೇಂದ್ರ ಗೃಹ ಇಲಾಖೆ ಆದೇಶಗಳನ್ನು ಉಲ್ಲಂಘಿಸಿರುವವರ ತನಿಖೆಗೆ ಆದೇಶಿಸದ ರಾಜ್ಯದ ಗೃಹ ಇಲಾಖೆ ಕೇಂದ್ರ ಗೃಹ ಇಲಾಖೆ ನಿರ್ದೇಶನಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.