ನವದೆಹಲಿ, ಏಪ್ರಿಲ್ 16,ಕೋವಿಡ್ -19 ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಸುಸ್ಥಿರ ರೀತಿಯಲ್ಲಿ ಕಾಪಾಡಿಕೊಂಡು ಜನರ ಜೀವನ ಮತ್ತು ಜೀವನೋಪಾಯವನ್ನು ಸಂರಕ್ಷಿಸಲು ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಭಾರತ ಪ್ರತಿಪಾದಿಸಿದೆ.ಜಿ- 20 ಒಕ್ಕೂಟದ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ ಸಭೆಯ ಎರಡನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಡ ದುರ್ಬಲ ವರ್ಗಗಳಿಗೆ ತ್ವರಿತ, ಸಮಯೋಚಿತ ಮತ್ತು ಉದ್ದೇಶಿತ ನೆರವು ಒದಗಿಸಲು ಭಾರತ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೊಳಿಸಿದೆ. ಒಂದೆರಡು ವಾರಗಳಲ್ಲಿ ಇದುವರೆಗೆ 320 ದಶಲಕ್ಷಕ್ಕೂ ಹೆಚ್ಚು ಜನರಿಗೆ 3.9 ಶತಕೋಟಿ ಡಾಲರ್ ಹಣಕಾಸಿನ ನೆರವು ನೀಡಿದೆ ಎಂದು ಹೇಳಿದರು. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪು ಸೇರುವುದು ಕಡಿಮೆಯಾಗಿದೆ. ಹಣಕಾಸು ಒಳಗೊಳ್ಳುವಿಕೆಯ ಕ್ರಮಗಳು ಫಲಿತಾಂಶ ನೀಡಲಾರಂಭಿಸಿವೆ. ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಮತ್ತು ಇತರ ನಿಯಂತ್ರಕ ಸಂಸ್ಥೆಗಳು ತೆಗೆದುಕೊಂಡ ವಿತ್ತೀಯ ಕ್ರಮಗಳಿಂದ ಹಣಕಾಸು ಮಾರುಕಟ್ಟೆಗಳು ಮುಕ್ತವಾಗಿರುವುದಲ್ಲದೆ ಸಾಲ ಹರಿವು ಹೆಚ್ಚಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.