ಹೆಚ್ಚೆಚ್ಚು ತೆರಿಗೆ ಸಂಗ್ರಹವಾದರೆ ತೆರಿಗೆ ಪ್ರಮಾಣ ಕಡಿತ: ನಿರ್ಮಲಾ ಸೀತಾರಾಮನ್

ಧಾರವಾಡ, ಅ 5:  ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್ಟಿ ಪದ್ಧತಿ ತಾಂತ್ರಿಕತೆಯನ್ನು ಅವಲಂಬಿಸಿದ್ದು, ಎರಡು ತೆರಿಗೆ ಹಾಗೂ ಇತರ ಹಲವು ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿಯನ್ನು ಇದು ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 ಅವರು ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ತೆರಿಗೆ ಸಲಹೆಗಾರರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಹಕರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಈ ಪದ್ದತಿಯನ್ನು ಜಾರಿಗೆ ತರಲಾಗಿದೆ. ವಸ್ತುಗಳ ಮೇಲೆ ಹಾಕುತ್ತಿದ್ದ ಹಲವು ತೆರಿಗೆಗಳನ್ನು ತೆಗೆದು ಹಾಕಿ ಒಂದೇ ಪದ್ದತಿ ಜಾರಿತೆ ತರಲಾಗಿದೆ. ಜನರು ಇದರೊಂದಿಗೆ ಹೊಂದಾಣಿಕೆ ಆಗಬೇಕಿದೆ ಎಂದರು. 

 ಜನರಿಗೆ ಇದನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಜನರಿಗೆ ತಿಳುವಳಿಕೆ ನೀಡಲಾಗುತ್ತಿದ್ದು, ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಹೊರೆಯಾಗದಂತೆ ಈ ನೀತಿಯನ್ನು ರೂಪಿಸಲಾಗಿದೆ ಎಂದರು. 

 ತೆರಿಗೆ ಸಲಹೆಗಾರರ ಮಾನ್ಯತೆಯನ್ನು ಕೇಂದ್ರ ಸರಕಾರ ಪರಿಗಣಿಸಲಿದೆ. ಶೀಘ್ರವಾಗಿ ಬೆಳೆಯುತ್ತಿರುವ ತೆರಿಗೆ ಪದ್ದತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ನೇರ ಹಾಗೂ ಪರೋಕ್ಷವಾಗಿ ಶೇ. 85 ರಷ್ಟು ತೆರಿಗೆ ವಂಚನೆ, ಮೋಸ ತಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಜಿಡಿಪಿಯ ಮೇಲೆ ಹೊಡೆತ ಬಿದ್ದಿದೆ. ನೋಟು ಅಮಾನ್ಯೀಕರಣದ ಪರಿಣಾಮ, ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ. ತೆರಿಗೆದಾರರು ಮತ್ತು ಸಲಹೆಗಾರರು ಸಾಧ್ಯವಾದಷ್ಟೂ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು, ತೆರಿಗೆ ಆರ್ಥಿಕ ಸ್ವಾತಂತ್ರ್ಯ ಬೇಕಾಗಿದೆ. ಈಗ ದೇಶಕ್ಕಾಗಿ ಬಲಿದಾನದ ಅಗತ್ಯವಿಲ್ಲ. ಆದರೆ ತೆರಿಗೆ ವ್ಯವಸ್ಥೆ ಬಲಪಡಿಸಬೇಕಾಗಿದೆ. ರೈತರಿಗೆ ಸೌಲಭ್ಯ, ರಸ್ತೆ, ಮೂಲಸೌಕರ್ಯ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬೇಕಾಗಿದೆ ಎಂದು ಹೇಳಿದರು. 

 ಹೆಚ್ಚು ಜನರು ತೆರಿಗೆ ಕಟ್ಟಿದರೆ ಹೆಚ್ಚು ಆದಾಯ ಘೋಷಣೆ ಮಾಡಿದರೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ. ಹೆಚ್ಚಿನ ಆದಾಯ ಬರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು. 

ತೆರಿಗೆ ಪ್ರಮಾಣ ಕಡಿಮೆ ಆಗಬೇಕಾದರೆ ಹೆಚ್ಚಿನ ತೆರಿಗೆ ಸಂಗ್ರಹ ಮಾಡಲು ಸಹಕರಿಸಬೇಕು ಎಂದು ಕರೆ ನೀಡಿದರು. 

ಇದಕ್ಕೂಮೊದಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದಾಗ ಮಾಜಿ ಸಂಸದರಾದ ಪ್ರೊ. ಐ. ಜಿ. ಸನದಿಯವರ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸದ್ಯ ಕೇಂದ್ರ ಸರ್ಕಾರ ಒದಗಿಸಿರುವ ರೂ 1200 ಕೋಟಿ ರೂ ಮಧ್ಯಂತರ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕರ್ನಾಟಕದ ಭೀಕರ ಪ್ರಕೃತಿ ವಿಕೋಪ ಪರಿಸ್ಥಿತಿ ಗಮನಿಸಿ ಇನ್ನೂ ಹೆಚ್ಚಿನ ಪರಿಹಾರ ಹಾಗೂ ವಿನಾಯಿತಿಗಳು ಮತ್ತು ವಸತಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೃಷಿಗೆ ಹೆಚ್ಚಿನ ಯೋಜನೆಗಳನ್ನು ಘೋಷಿಸಲು ಮನವಿ ಸಲ್ಲಿಸಲಾಯಿತು.

 ನೆರೆ ಸಂತ್ರಸ್ತರ ಪರಿಸ್ಥಿತಿ ಹಾಗೂ ಹಾನಿಯ ತೀವ್ರತೆಯನ್ನು ಸಚಿವರಿಗೆ ಮನದಟ್ಟು ಮಾಡಲಾಯಿತು. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ನೆರೆಸಂತ್ರಸ್ತ ಪ್ರದೇಶಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಅನುದಾನ ಹಾಗೂ ಪರಿಹಾರ ಘೋಷಿಸುವಂತೆ ಮನವಿ ಸಲ್ಲಿಸಲಾಯಿತು.  

 ಕಾಂಗ್ರೆಸ್ ಪಕ್ಷದ ಈ ನಿಯೋಗದಲ್ಲಿ ಶಾಕೀರ್ ಸನದಿ, ರಾಜಶೇಖರ್ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಇಲಿಯಾಸ್ ಮನಿಯಾರ್, ಸುರೇಶ್ ಸವಣೂರು, ನರಸಾಪುರ, ರಾಜು ಆಟಗಾರ ಮತ್ತಿತರರು ಇದ್ದರು.