ನವದೆಹಲಿ, ಮಾ ೨೦,ಗಲ್ಲು ಶಿಕ್ಷೆ ಜಾರಿಗೆ ಮುನ್ನ ನಿರ್ಭಯಾ ಅಪರಾಧಿಗಳು ತಮ್ಮ ಅಂತಿಮ ಆಸೆಯನ್ನು ಹೇಳಿಕೊಳ್ಳಲಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ರಾತ್ರಿ ಪೂರ್ತಿ ನಿದ್ರಿಸದೆ ಎಚ್ಚರವಾಗಿದ್ದರು. ಕಳೆದ ರಾತ್ರಿ ಊಟವನ್ನೂ ಮಾಡಲಿಲ್ಲ, ಇಂದು ನೇಣಿಗೇರಿಸುವ ಒಂದು ತಾಸು ಮೊದಲು ಉಪಹಾರ ಸೇವಿಸಲು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.
ಮರಣದಂಡನೆ ಜಾರಿಯ ಹಿಂದಿನ ದಿನ (ಗುರುವಾರ ರಾತ್ರಿ) ನಾಲ್ವರನ್ನು ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಗಿತ್ತು. ಶುಕ್ರವಾರ ಮುಂಜಾನೆ ೩: ೩೦ ಕ್ಕೆ ಅವರನ್ನು ಎಚ್ಚರಿಸಿ ಸುಪ್ರೀಂ ಕೋರ್ಟ್ ಗೆ ಅಪರಾಧಿಗಳು ಸಲ್ಲಿಸಿದ್ದ ಕೊನೆಯ ಅರ್ಜಿ ವಜಾಗೊಳಿಸಿರುವ ವಿಷಯ ತಿಳಿಸಲಾಯಿತು. ಸ್ನಾನ ಮಾಡಿಕೊಳ್ಳುವಂತೆ ಸೂಚಿಸಲಾಯಿತು. ಆದರೆ, ಅವರು ಸಮ್ಮತಿಸಲಿಲ್ಲ. ನಿರ್ಭಯಾ ಅಪರಾಧಿಗಳಾದ ಮುಖೇಶ್ ಸಿಂಗ್ (೩೨), ಪವನ್ ಗುಪ್ತಾ (೨೫), ವಿನಯ್ ಶರ್ಮಾ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ಇಂದು ಬೆಳಿಗ್ಗೆ ತಿಹಾರ್ ಕೇಂದ್ರ ಕಾರಾಗೃಹದ ಜೈಲು ಸಂಖ್ಯೆ ೩ ರಲ್ಲಿ ಗಲ್ಲಿಗೇರಿಸಲಾಯಿತು. ಮರಣದಂಡನೆಗೆ ಮುನ್ನ ಅಪರಾಧಿಗಳನ್ನು ನಿರ್ಭಯಾ ಕುಟುಂಬ ಸದಸ್ಯರಿಗೆ ತೋರಿಸಲಾಯಿತು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಮರಣದಂಡನೆ ಜಾರಿ ಹಿನ್ನೆಲೆಯಲ್ಲಿ, ಇಡೀ ಜೈಲು ಆವರಣಕ್ಕೆ ಬೀಗಹಾಕಿ, ಭಾರಿ ಬಿಗಿ ಭದ್ರತೆ ಮಾಡಲಾಗಿತ್ತು.
ಜೈಲಿನಲ್ಲಿದ್ದ ಅವಧಿಯಲ್ಲಿ ಪವನ್, ವಿನಯ್ ಮತ್ತು ಮುಖೇಶ್ ಕೆಲಸ ಮಾಡಿದ್ದರಿಂದ ಗಳಿಸಿದ ಎಲ್ಲಾ ಹಣವನ್ನು ಅವರ ಕುಟುಂಬಗಳಿಗೆ ನೀಡಲಾಗುವುದು ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ೫: ೩೦ ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿ ಸಂದೀಪ್ ಗೋಯಲ್ ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ಗಲ್ಲಿಗೇರಿಸುವ ವ್ಯಕ್ತಿ ಪವನ್ ಜಲ್ಲಾಡ್ ನಾಲ್ವರು ಅಪರಾಧಿಗಳನ್ನು ೩೦ ನಿಮಿಷಗಳಲ್ಲಿ ಗಲ್ಲಿಗೇರಿಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸಾಗಿಸಲಾಗಿದೆ. ಏತನ್ಮಧ್ಯೆ, ಗಲ್ಲಿಗೇರಿಸುವ ಮುಂಚೆ ತನ್ನನ್ನು ಗಲ್ಲಿಗೇರಿಸದಂತೆ ಅಪರಾಧಿ ವಿನಯ್ ಕುಮಾರ್ ಜೈಲು ಅಧಿಕಾರಿಗಳನ್ನು ಬೇಡಿಕೊಂಡಿದ್ದ ಎಂದು ವರದಿಯಾಗಿದೆ. ನೇಣು ಹಾಕುವ ಭೀತಿ ಹಿನ್ನಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಅವರು ಗೋಡೆಗೆ ತಲೆ ಹೊಡೆದುಕೊಂಡು ಗಾಯಗೊಂಡಿದ್ದ ಎಂದು ವರದಿಯಾಗಿತ್ತು.