ನಿರ್ಭಯಾ ಪ್ರಕರಣಗಳು ಮರುಕಳಿಸದಿರಲಿ : ಕೇಜ್ರಿವಾಲ್ ಮನವಿ

ನವದೆಹಲಿ, ಮಾ 20, ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯಂತಹ ಪ್ರಕರಣಗಳು ಮರುಕಳಿಸದಿರಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಶಿಸಿದ್ದಾರೆ.ನಿರ್ಭಯಾ ಅಪರಾಧಿಗಳಿಗೆ ಇಂದು ಬೆಳಗಿನ ಜಾವ ಗಲ್ಲುಶಿಕ್ಷೆ ಜಾರಿಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿರುವ ಕೇಜ್ರಿವಾಲ್, “ಭವಿಷ್ಯದಲ್ಲಿ ಯಾವುದೇ ಹೆಣ್ಣು ಮಗಳು ಇಂತಹ ಘಟನೆಗಳಿಗೆ ಸಿಲುಕದಂತೆ, ವ್ಯವಸ್ಥೆಯಲ್ಲಿನ ಲೋಪ ದೋಷ ಸರಿಪಡಿಸುವುದಾಗಿ, ಕೇಂದ್ರ, ರಾಜ್ಯ ಸರ್ಕಾರಗಳು, ಪೊಲೀಸ್, ನ್ಯಾಯಾಲಯ ಸೇರಿದಂತೆ ಪ್ರತಿಯೊಬ್ಬರೂ ಇಂದು ಪ್ರಮಾಣ ಮಾಡಬೇಕು” ಎಂದು ಹೇಳಿದ್ದಾರೆ.ಕಳೆದ 2012ರ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತ (25), ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ರನ್ನು ಇಂದು ಬೆಳಗ್ಗೆ 5:30ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.ದೆಹಲಿಯಲ್ಲಿ 2012 ಡಿಸೆಂಬರ್ 16ರಂದು ಚಲಿಸುವ ಬಸ್ಸಿನಲ್ಲಿ ವೈದ್ಯಕೀಯೇತರ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.