ಬೆಂಗಳೂರು, ನ 10 : ಪಕ್ಷ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ, ಸಂಘಟನೆಗೂ ಆದ್ಯತೆ ನೀಡದೇ ಚಲನಚಿತ್ರ, ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದಿನ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಕೂಡ ಪಕ್ಷಸಂಘಟನೆ ಮಾಡದೇ ವಿದೇಶ ಸುತ್ತುತ್ತಿದ್ದರು. ಈಗಿನ ಹೊಸ ಅಧ್ಯಕ್ಷರು ಸಹ ಚಿತ್ರೀಕರಣ, ವಿದೇಶ ಪ್ರವಾಸ ಎಂದೆಲ್ಲ ಕಾಲಾಹರಣ ಮಾಡುತ್ತಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಪಕ್ಷ ಸಂಘಟನೆಯನ್ನು ನಿರ್ಲಕ್ಷಿಸಿದ್ದಾರೆ. ಆದಷ್ಟು ಬೇಗ ಯುವ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೆಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ನಿಖಿಲ್ಕುಮಾರಸ್ವಾಮಿ ವಿರುದ್ಧ ಗರಂ ಆಗಿರುವ ಸ್ವಕ್ಷೀಯರು ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಿಖಿಲ್ ಗೆ ಯುವ ಜೆಡಿಎಸ್ ಅಧ್ಯಕ್ಷ ಸ್ಥಾನ ಏಕೆ ಬೇಕು?. ಸಿನಿಮಾ ಮಾಡಿಕೊಂಡೇ ಇದ್ದುಬಿಡುವುದು ಸೂಕ್ತ. ನಿಮಗೆ ಸಿನಿಮಾ ಆದ್ಯತೆಯಾದರೆ ಮೊದಲು ಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ. ನಿಮ್ಮ ತಾಯಿಯ ಆಸೆಯಂತೆ ಸಿನಿಮಾದಲ್ಲೇ ಇದ್ದುಬಿಡಿ. ಶೋಕಿಗಾಗಿ ರಾಜಕೀಯ ಮಾಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಇವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರಿಂದ ನಮ್ಮ ಮರ್ಯಾದೆ ಹಾಳಾಗುತ್ತಿದೆ. ಇಂತಹವರನ್ನು ನಂಬಿದರೆ ಪಕ್ಷ ಸಂಘಟನೆಯಾಗುವ ಬದಲು ಪಕ್ಷವೇ ನಿರ್ನಾಮವಾಗಲಿದೆ. ಜೆಡಿಎಸ್ ನಂಬಿ ಬಂದವರು ನಾಮಾವಶೇಷವಾತ್ತಾರೆ. ಇವರನ್ನು ನೋಡಿ ನಮಗೆ ಜಿಗುಪ್ಸೆಯಾಗುತ್ತದೆ ಎಂದು ನಿಖಿಲ್ ನಾಯಕತ್ವದ ವಿರುದ್ಧ ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವರು ನಿಖಿಲ್ ಅವರನ್ನು ಯುವ ಘಟಕದಿಂದ ಕೆಳಗಿಳಿಸಿ ಯುವ ಘಟಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾದಗಿರಿ ಜಿಲ್ಲೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಅವರನ್ನು ನೇಮಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ನ ಕೆಲವು ಹಿರಿಯರ ವಿರೋಧದ ನಡುವೆಯೂ ಯುವ ಘಟಕ ರಾಜ್ಯಾಧ್ಯಕ್ಷ ಸ್ಥಾನದಂತಹ ಪ್ರಮುಖ ಜವಾಬ್ದಾರಿಯನ್ನು ಪಕ್ಷದ ವರಿಷ್ಠ ಹಾಗೂ ತಾತ ದೇವೇಗೌಡ ವಹಿಸಿದ್ದರು. ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ಕಾಲ ಕಾರ್ಯಕರ್ತರೊಡನೆ ಸಂಚರಿಸಿದ್ದು ಬಿಟ್ಟರೆ ಪಕ್ಷ ಸಂಘಟನೆಯಲ್ಲಿ ನಿಖಿಲ್ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಮೇಲ್ಮನೆಯ ನಾಲ್ಕು ಹಾಗೂ ವಿಧಾನಸಭೆಯ 15 ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದ್ದರೂ ನಿಖಿಲ್ ಕುಮಾರಸ್ವಾಮಿ ಪಕ್ಷ ಬಲವರ್ಧನೆಗೊಳಿಸುವುದಾಗಲೀ, ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸವಾಗಲೀ ಮಾಡುತ್ತಿಲ್ಲ ಎಂದಿದ್ದಾರೆ. ಸದಾ ವೈಯಕ್ತಿಕ ಕಾರ್ಯಚಟುವಟಿಕೆಗಳಲ್ಲಿ, ಸಿನಿಮಾ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ತಂದೆತಾಯಿ ಜೊತೆಗೆ ವಿದೇಶದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಒಂದು ಕಡೆ ಪ್ರಾದೇಶಿಕ ಪಕ್ಷವನ್ನು ಉಳಿಸಿಯೇ ತೀರುತ್ತೇನೆ ಎಂಬ ಹಠದಲ್ಲಿ ದೇವೇಗೌಡರು ನಿರಂತರ ಸಭೆ ನಡೆಸಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ನಿಖಿಲ್ ಕುಮಾರಸ್ವಾಮಿ ಎಲ್ಲೂ ಕಾಣುತ್ತಿಲ್ಲ. ಇದರಿಂದ ಬೇಸತ್ತ ಯುವಕಾರ್ಯಕರ್ತರು ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ. ಇತ್ತೀಚೆಗಿನ ಯಾದಗಿರಿ ಪ್ರತಿಭಟನೆ, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಯಡಿಯೂರಪ್ಪ ಆಪರೇಷನ್ ಕಮಲದ ಧ್ವನಿಮುದ್ರಿಕೆ ಬಹಿರಂಗಗೊಳಿಸಿರುವ ಶರಣಗೌಡ ಕಂದಕೂರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಗುರುಮಿಠಕಲ್ ಶಾಸಕ ನಾಗನಗೌಡ ಅವರ ಪುತ್ರನೂ ಆಗಿರುವ ಶರಣಗೌಡಗೆ ಪಕ್ಷ ಸಂಘಟನೆಯಲ್ಲಿ ಆಸಕ್ತಿಯಿದ್ದು, ಯುವ ಘಟಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಕಂದಕೂರನ್ನೇ ನೇಮಿಸುವುದು ಸೂಕ್ತ ಎಂದಿದ್ದಾರೆ. ಈ ಸಂಬಂಧ ಯುಎನ್ಐ ಕನ್ನಡ ಸುದ್ದಿಸಂಸ್ಥೆ ಜೊತೆಗೆ ಶರಣಗೌಡ ಕಂದಕೂರ ಮಾತನಾಡಿ, ನಿಖಿಲ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಪ್ಪಿರಲಿಲ್ಲ. ಪಕ್ಷಸಂಘಟನೆಯ ದೃಷ್ಟಿಯಿಂದ ಅವರನ್ನು ದೇವೇಗೌಡರು ಹಾಗೂ ಕಾರ್ಯಕರ್ತರ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದು ಯುವಘಟಕದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದರು. ಅವರು ಶೋಕಿಗಾಗಿ ಯುವಘಟಕದ ಅಧ್ಯಕ್ಷರಾಗಲಿಲ್ಲ. ನಾಯಕರ ಕುಟುಂಬದಿಂದ ರಾಜಕೀಯದಲ್ಲಿ ಪಳಗಿ ಬಂದಿದ್ದಾರೆ. ಆದರೆ ಕೆಲವರು ನನ್ನ ಹೆಸರನ್ನು ಮುನ್ನಲೆಗೆ ತಂದು ಪೋಸ್ಟ್ ಮಾಡುತ್ತಿರುವ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.