ರಾಮನಗರ, ಏ 17, ಕರೋನ ರಾಜ್ಯವನ್ನು , ದೇಶವನ್ನು ತೀವ್ರವಾಗಿ ಕಾಡುತ್ತಿರುವ ನಡುವೆಯೂ ಶುಕ್ರವಾರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಹಾಗೂ ರೇವತಿ ಸರಳ ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಡದಿಯ ಕೇತಿಗಾನಹಳ್ಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ನಿಖಿಲ್ ರೇವತಿ ಸರಳ ವಿವಾಹ ನಡೆದಿದ್ದು, ಇಂದು ಬೆಳಗ್ಗೆ 9.30ಕ್ಕೆ ಶುಭಮುಹೂರ್ತದಲ್ಲಿ ಧಾರೆ ಕಾರ್ಯಕ್ರಮಗಳು ನಡೆದವು.ಬೆಳಗ್ಗೆ 9.45ಶುಭಮುಹೂರ್ತದಲ್ಲಿ ರೇವತಿಗೆ ನಿಖಿಲ್ ಮಾಂಗಲ್ಯ ಧಾರಣೆ ಮಾಡಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ನಿಖಿಲ್ ಕುಟುಂಬದವರು ಹಾಗೂ ರೇವತಿ ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಈ ಮೊದಲು ರಾಮನಗರದ ಜಾನಪದಲೋಕದ ಪಕ್ಕದಲ್ಲಿ ಮದುವೆ ಕಾರ್ಯ ನಡೆಸಲು ನಿರ್ಧರಿಸಲಾಗಿತ್ತು. ನಂತರ ಮದುವೆ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಬೆಂಗಳೂರು ಕೊರೋನಾದಿಂದಾಗಿ ರೆಡ್ ಜೋನ್ ನಲ್ಲಿರುವ ಕಾರಣ ರಾಮನಗರ ಜಿಲ್ಲೆಯ ಬಿಡದಿಯ ಕೇತಿಗಾನಹಳ್ಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ನಿಖಿಲ್ ರೇವತಿ ಸರಳ ವಿವಾಹ ನಡೆಯಿತು. ಮದುವೆಗೆ ಯಾರು ಬರಬೇಡಿ ನಂತರ ದಂಪತಿಗಳೆ ನಿಮ್ಮ ಮುಂದೆ ಬರಲಿದ್ದಾರೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮನವಿ ಮಾಡಿದ್ದರು. ಕಾರ್ಯಕ್ರಮದಲ್ಲಿ ಹೆಚ್ ಡಿ ರೇವಣ್ಣ, ಅವರ ಪುತ್ರ ಸಂಸದ, ಪ್ರಜ್ವಲ್ ರೇವಣ್ಣ ಮತ್ತು ಭವಾನಿ ಹಾಗು ಕುಟುಂಬದ ಕೆಲವೇ ಆಪ್ತರು ಹಾಜರಿದ್ದರು.