ನವದೆಹಲಿ: ಬಿಜೆಪಿ ಸೇರ್ಪಡೆಗೊಂಡ ಭಾರತ ತಂಡದ ಮಾಜಿ ಆಟಗಾರ ಗೌತಮ್‌ ಗಂಭಿರ್‌

ನವದೆಹಲಿ, ಮಾ 22 : ಭಾರತ ತಂಡದ ಮಾಜಿ ನಾಯಕ ಗೌತಮ್‌ ಗಂಭೀರ್‌ ಅವರು ಶುಕ್ರವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೆಟ್ಲಿ ಹಾಗೂ ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಸೇರ್ಪಡೆಗೊಂಡರು. 

ಗೌತಮ್‌ ಗಂಭಿರ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಅರುಣ್‌ ಚೆಟ್ಲಿ, "ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮಾಡಿರುವ ಸಾಧನೆಗಳು ಗಂಭೀರ್‌ ಅವರ ಕೇಸರಿ ಪಕ್ಷ ಸೇರ್ಪಡೆಯಿಂದ ಪ್ರತಿಬಿಂಬಿಸುತ್ತಿವೆ" ಎಂದರು.

"ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೇವೆಯಿಂದ ಪ್ರೇರಿತನಾಗಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿಯಲು ಬಿಜೆಪಿ ಪಕ್ಷ ಉತ್ತಮ ವೇದಿಕೆಯಾಗಿದೆ. ಹಾಗಾಗಿ, ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಗಂಭೀರ್‌ ಪಕ್ಷ ಸೇರ್ಪಡೆ ಬಳಿಕ ತಿಳಿಸಿದ್ದಾರೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸತತ ಐದು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಹಾಗೂ ವಿಶ್ವದ ನಾಲ್ಕು ಆಟಗಾರರಲ್ಲಿ ಗೌತಮ್‌ ಗಂಭೀರ್‌ ಒಬ್ಬರಾಗಿದ್ದಾರೆ. ಅಲ್ಲದೆ,  ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ 300 ಕ್ಕೂ ಹೆಚ್ಚು ರನ್‌ ಗಳಿಸಿದ್ದ ಭಾರತದ ಮೊದಲ ಆಟಗಾರರಾಗಿದ್ದಾರೆ. 

ಗಂಭೀರ್‌ 58 ಟೆಸ್ಟ್‌ ಪಂದ್ಯಗಳಲ್ಲಿ 4154 ರನ್‌, 147 ಏಕದಿನ ಪಂದ್ಯಗಳಿಂದ 5238 ರನ್‌ ಹಾಗೂ 37 ಟಿ-20 ಪಂದ್ಯಗಳಿಂದ 932 ರನ್‌ ದಾಖಲಿಸಿದ್ದಾರೆ. ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಸಾಧನೆ ಗುರಿತಿಸಿ ಅವರಿಗೆ ಇತ್ತೀಚಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲಾಗಿದೆ. 2008ರಲ್ಲಿ ಗಂಭೀರ್‌, ಅರ್ಜುನ ಪ್ರಶಸ್ತಿ ಪಡೆದುಕೊಂಡಿದ್ದಾರೆ.