ನವದೆಹಲಿ, ಮಾರ್ಚ್ 25: -ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಮುಂದಿನ ತಿಂಗಳ 2 ರವರೆಗೆ ಕ್ರೋಯೆಷಿಯಾ, ಬೊಲಿವಿಯಾ ಹಾಗೂ ಚಿಲಿ ದೇಶಗಳಿಗೆ ಅಧಿಕೃತ ಭೇಟಿ ಆರಂಭಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೂರ್ವ ದೇಶಗಳ ಕಾರ್ಯದರ್ಶಿ ವಿಜಯ ಠಾಕೂರ್ ಸಿಂಗ್ ತಿಳಿಸಿದ್ದಾರೆ.
ತಮ್ಮ ಭೇಟಿಯಯ ಮೊದಲ ಚರಣದಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ಕ್ರೋಯೇಷಿಯಾ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿ ಭೇಟಿಯಿಂದ ಕ್ರೋಯೇಷಿಯದ ವಿವಿಧ ವಲಯಗಳಲ್ಲಿ ಹೂಡಿಕೆ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ ಎಂಬ ಆಶಯವಿದೆ. ರಾಷ್ಟ್ರಪತಿ ಕೋವಿಂದ್ ಅವರ ಮೊದಲ ಕ್ರೋಯೇಷಿಯ ಭೇಟಿಇದಾಗಿದೆ.
ಬೊಲಿವಿಯಾದಲ್ಲಿ ರಾಷ್ಟ್ರಪತಿ ತಮ್ಮ ಸಹವರ್ತಿ ಹಾಗೂ ನಿಯೋಗ ಮಟ್ಟದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಾರತ- ಬೊಲಿವಿಯಾ ಉದ್ಯಮ ವೇದಿಕೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬೊಲಿವಿಯಾದೊಂದಿಗಿನ ಭಾರತ ಬಾಂಧವ್ಯ ಪುರಾತನ ಹಾಗೂ ಹಾರ್ಧಿಕವಾಗಿದ್ದು, ಉಭಯ ದೇಶಗಳ ನಡುವಣ ವ್ಯಾಪಾರ ಸಾಕಷ್ಟು ಸುಧಾರಿಸಿದೆ. ಭಾರತ ಬೊಲಿವಿಯಾ ದೇಶಕ್ಕೆ ಸಾಮರ್ಥ್ಯ ವೃದ್ಧಿ ವಲಯದಲ್ಲಿ ಬೆಂಬಲ ಒದಗಿಸುತ್ತಿದೆ.
ತಮ್ಮ ಮೂರು ದೇಶಗಳ ಭೇಟಿಯ ಕೊನೆಯ ಚರಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾರ್ಚ್ 30ರಂದು ಚಿಲಿಗೆ ಭೇಟಿ ನೀಡಲಿದ್ದು, ಚಿಲಿ ಅಧ್ಯಕ್ಷರೊಂದಿಗೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ವ್ಯಾಪಾರ ಹಾಗೂ ಆರ್ಥಿಕ ಸಂಬಂಧ ಸುಧಾರಣೆ ಈ ಭೇಟಿ ಕಾರ್ಯಸೂಚಿಯಾಗಿದೆ. ರಾಷ್ಟ್ರಪತಿ ಕೋವಿಂದ್ ಭಾರತೀಯ ಸುಮುದಾಯದೊಂದಿಗೆ ಸಂವಾದ ನೆಡಸಲಿದ್ದಾರೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಈ ಮೂರು ದೇಶಗಳ ಭೇಟಿಯಿಂದ ಭಾರತದ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಸುಧಾರಿಸಲಿದೆ ಎಂದು ಕಾರ್ಯದರ್ಶಿ ವಿಜಯ ಠಾಕೂರ್ ಸಿಂಗ್ ಹೇಳಿದರು.