ಬೆಂಗಳೂರು, ಡಿ.17 : ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಉದ್ಯಮಿಗಳಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ಮಾಹಿತಿ ತಂತ್ರಜ್ಞಾನ ನೀತಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ನವೋದ್ಯಮಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಿದ್ದು, ಹೊಸ ನೀತಿಯನ್ನು ಜಾರಿಗೆ ತರಲಾಗುವುದು. ಉದ್ಯಮಗಳಿಗೆ ಬೆಂಗಳೂರು ನೆಚ್ಚಿನ ತಾಣವಾಗಿದ್ದು, ಉದ್ಯಮಿಗಳಿಗಾಗಿ ಕಾನೂನು ತೊಡಕುಗಳನ್ನು ನಿವಾರಣೆ ಮಾಡಲಾಗಿದೆ. ರಾಜ್ಯದಲ್ಲಿ ಯುವ ಉದ್ಯಮಿಗಳಿಗೆ ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಹಾಗೂ ಬೆಂಗಳೂರಿನ ಎರಡು ಮತ್ತು ಮೂರನೇ ಹಂತದ ನಗರಗಳತ್ತ ತಂತ್ರಜ್ಞಾನ ಕ್ಷೇತ್ರ ವ್ಯಾಪಿಸಬೇಕಿದ್ದು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ನೀತಿ ಆಯೋಗದಿಂದ ರಾಜ್ಯಗಳಿಗೆ ಇತ್ತೀಚೆಗೆ ನೀಡಲಾದ ಪ್ರಪ್ರಥಮ ನಾವೀನ್ಯತಾ ಶ್ರೇಯಾಂಕದಲ್ಲಿ ಕರ್ನಾಟಕ ರಾಜ್ಯಕ್ಕೆ ದೇಶದಲ್ಲೇ ಅಗ್ರ ಶ್ರೇಯಾಂಕ ಲಭಿಸಿದೆ. ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ಜಾಗತಿಕ ಆರ್ಥಿಕತೆಯಲ್ಲಿ ತನ್ನ ಮಾನ್ಯತೆ ಹೆಚ್ಚಿಸಿಕೊಳ್ಳಲು ರಾಜ್ಯ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆ ಎಂದರು.
ನಾವೀನ್ಯತೆಯುಳ್ಳ ವಾಣಿಜ್ಯೋದ್ಯಮಿಗಳನ್ನು ಸರ್ಕಾರ ಉತ್ತೇಜಿಸಿ ಪ್ರೋತ್ಸಾಹಿಸುತ್ತದೆ. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಒಂದು ಅಧಿನಿಯಮದಡಿ ತರಲಾಗುವುದು. ವಿಶೇಷವಾಗಿ ನಾವೀನ್ಯತೆಗಾಗಿ ಕಾನೂನಿನ ಚೌಕಟ್ಟು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ತಾವು ಐಟಿ ಬಿಟಿ ಇಲಾಖೆ ವಹಿಸಿಕೊಂಡು ಇಂದಿಗೆ ನೂರು ದಿನ ಪುರೈಸಿದ್ದು, ಯುವ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಒಳ್ಳೆಯ ಅವಕಾಶ ಕಲ್ಪಿಸುತ್ತಿದೆ. ಬೆಂಗಳೂರು ನಗರ ಸ್ಟಾರ್ಟ್ ಅಪ್ ಗಳಿಗೆ ಒಳ್ಳೆಯ ವೇದಿಕೆಯಾಗಿದೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಕೋರ್ಸ್ಗಳನ್ನು ನೀಡುವ ಅವಶ್ಯಕತೆ ಇದೆ ಎಂದು ವೇದಿಕೆ ಮೇಲಿದ್ದ ವಿಟಿಯು ಕುಲಪತಿ ಕರಿಸಿದಪ್ಪ ಅವರಿಗೆ ಸಲಹೆ ನೀಡಿದರು.
ಇಲ್ಲಿನ ತಂತ್ರಜ್ಞಾನ ಬೆಂಗಳೂರು ನಗರದ ಎಲ್ಲಾ ಕ್ಷೇತ್ರವನ್ನೂ ವ್ಯಾಪಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ತೊಡಕುಗಳನ್ನ ನಿವಾರಣೆ ಮಾಡಿದ್ದು, ಹೊಸ ಆವಿಷ್ಕಾರಗಳಿಗೆ ವಿನಾಯಿತಿ ನೀಡಿದೆ. ನೂತನವಾಗಿ ಕರ್ನಾಟಕ ಇನೋವೆಷನ್ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರಲಾಗಿದೆ. ಶಿಕ್ಷಣ ಕ್ಷೇತ್ರದ ಬದಲಾವಣೆಗಾಗಿ ವಿಷನ್ ಗ್ರೂಪ್ ಸಹ ತರಲಾಗಿದೆ. ವಿಷನ್ ಗ್ರೂಪ್ ಸಲಹೆ ಮೇರೆಗೆ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ವಿವರಿಸಿದರು.
ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಾಗಬೇಕಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬೇಕಿದೆ.
ಎಲ್ಲರಿಗೂ ಉತ್ತಮ ಆರೋಗ್ಯ ದೊರೆಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಕೆಲದಿನಗಳ ಹಿಂದೆ ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ಐಟಿಬಿಟಿಯಲ್ಲಿ ಬೆಂಗಳೂರಿಗಿಂತ ಬೇರೆ ನಗರ ಮುಂಚೂಣಿಯಲ್ಲಿದೆ ಎಂಬ ವರದಿ ಸುಳ್ಳಾಗಿದ್ದು, ಐಟಿ ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ಎಂದಿಗೂ ಮುಂದಿರುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಪಾನ್ ಮತ್ತು ಕರ್ನಾಟಕ ರಾಜ್ಯದ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಮಾಹಿತಿ, ಜೈವಿಕ ತಂತ್ರಜ್ಞಾನ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ಕುಮಾರ್ ಮಿಶ್ರಾ, ಸ್ಟಾರ್ಟ್ ಅಪ್ಗಳ ದಾರ್ಶನಿಕ ಸಮೂಹದ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಹಾಗೂ ಫ್ರಾನ್ಸ್ ನ ರಾಯಭಾರಿ ಕಚೇರಿ ಅಧಿಕಾರಿಗಳು ಉಪಸ್ಥಿತರಿದ್ದರು. ಸಾಧಿಸಿದೆ.