ಮಹಾರಾಷ್ಟ್ರದಲ್ಲಿ ಶೀಘ್ರವೇ ಹೊಸ ಸರ್ಕಾರ ರಚನೆ: ಫಡ್ನವಿಸ್ ವಿಶ್ವಾಸ

 ನವದೆಹಲಿ, ನ 4:    ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ನಿರಂತರ ಅಡಚಣೆಗಳ ನಡುವೆ,  ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ಇಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಶೀಘ್ರವೇ ಹೊಸ ಸರ್ಕಾರ ರಚನೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇಬ್ಬರು ಪ್ರಮುಖ ರಾಜಕೀಯ ಪಾತ್ರಧಾರಿಗಳಾದ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು  ಫಡ್ನವಿಸ್ ಅವರು ತಮ್ಮ, ತಮ್ಮ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲು ಇಲ್ಲಿಗೆ ಆಗಮಿಸುವುದರೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತ ಸಂಪೂರ್ಣ ರಾಜಕೀಯ ಪ್ರಕ್ರಿಯೆ ರಾಜಧಾನಿಗೆ ಸ್ಥಳಾಂತರಗೊಂಡಿದ್ದು, ಫಡ್ನವೀಸ್-ಷಾ ಸಭೆ ಮಹತ್ವ ಪಡೆದಿದೆ. ಸಂಭಾವ್ಯ ಮೈತ್ರಿ ರಚನೆಗಾಗಿ ಮತ್ತು ಬಿಜೆಪಿ ಹೊರತಾದ ಸರ್ಕಾರ ರಚನೆಗೆ ಎನ್ಸಿಪಿಯನ್ನು ಶಿವಸೇನೆ ಸಂಪರ್ಕಿಸಿದೆ. 'ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಬಗ್ಗೆ ಪ್ರತಿಯೊಬ್ಬರೂ ಕೆಲವು ಪ್ರತಿಕ್ರಿಯೆಗಳನ್ನು ನೀಡುತ್ತಿರುವುದರಿಂದ ತಾವು ಹೆಚ್ಚಿನದನ್ನು ಪ್ರತಿಕ್ರಿಯಿಸಲು ಬಯಸುವುದಿಲ್ಲ' ಎಂದು ಫಡ್ನವಿಸ್ ಹೇಳಿದ್ದಾರೆ.  ಈ ಮಧ್ಯೆ,  ಹಣಕಾಸು ಮತ್ತು ಕಂದಾಯ ಸೇರಿದಂತೆ  ಪ್ರಮುಖ ಖಾತೆಗಳ ಹಂಚಿಕೆ ಬಗ್ಗೆ ಬಿಜೆಪಿ, ಸೇನಾ ನಾಯಕತ್ವದೊಂದಿಗೆ ಸಂವಹನವನ್ನು ಮುಂದುವರಿಸಿದ್ದು,  ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.