ನವದೆಹಲಿ. ಮಾರ್ಚ್ 20: ವಂಶಾಡಳಿತ ರಾಜಕೀಯದಿಂದ ಸರ್ಕಾರಿ ಸಂಸ್ಥೆಗಳಿಗೆ ತೀವ್ರ ಹಾನಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ.
'ವಂಶಾಡಳಿತದಿಂದ ಪತ್ರಿಕೋದ್ಯಮದಿಂದ ಸಂಸತ್‍ವರೆಗೆ, ಸೈನಿಕರಿಂದ ಹಿಡಿದು ವಾಕ್ ಸ್ವಾತಂತ್ರ್ಯದ ವರೆಗೆ, ಸಾಂವಿಧಾನದಿಂದ ಹಿಡಿದು ನ್ಯಾಯಾಲಯದವರೆಗೆ ಎಲ್ಲದರಲ್ಲೂ ಕುಂದು ಉಂಟಾಗಲಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮುಕ್ತ ಪತ್ರಿಕೋದ್ಯಮದಿಂದ ವಂಶಾಡಳಿತ ಪಕ್ಷಗಳಿಗೆ ನೆಮ್ಮದಿ ಇರುವುದಿಲ್ಲ. ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲೆಂದೇ ಕಾಂಗ್ರೆಸ್ ಸರ್ಕಾರ ಮೊದಲ ಸಾಂವಿಧಾನಿಕ ತಿದ್ದುಪಡಿ ಮಸೂದೆ ಜಾರಿಗೊಳಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಅವಹೇಳನಕಾರಿ ಎನಿಸುವ ಯಾವುದೇ ವಿಷಯವನ್ನು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದರೆ ಜೈಲಿಗೆ ತರುವ ಕಾನೂನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು.
ಪ್ರಭಾವಶಾಲಿ ಯುಪಿಎ ಸಚಿವರ ಪುತ್ರನ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಅಮಾಯಕ ನಾಗರಿಕರನ್ನು ಜೈಲಿ ತಳ್ಳಲಾಗಿತ್ತು. ಮೊನ್ನೆಯಷ್ಟೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿರುವ ಕರ್ನಾಟಕದಲ್ಲಿ ತಮ್ಮ ನಿಜವಾದ ಭಾವನೆಯನ್ನು ವ್ಯಕ್ತಪಡಿಸಿದ ಯುವಕರನ್ನು ಬಂಧಿಸಿರುವುದನ್ನು ಇಡೀ ದೇಶ ಭಯದಿಂದ ನೋಡಿದೆ ಎಂದು ಅವರು ಹೇಳಿದ್ದಾರೆ.
'ಭಯ ಹುಟ್ಟಿಸುವುದರಿಂದ ಸತ್ಯಾಂಶಗಳು ಬದಲಾಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ಹೇಳಲಿಚ್ಛಿಸುತ್ತೇನೆ. ಪಕ್ಷದ ಮೇಲೆ ಜನರು ಹೊಂದಿರುವ ಕೆಟ್ಟ ಭಾವನೆಯನ್ನು ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಮೂಲಕ ಬದಲಾಯಿಸಲಾಗುವುದಿಲ್ಲ' ಎಂದು ಮೋದಿ ಹೇಳಿದ್ದಾರೆ.
ನ್ಯಾಯಾಲಯಗಳು ಸಂವಿಧಾನಕ್ಕಿಂತ ಕುಟುಂಬಕ್ಕೆ ನಿಷ್ಠವಾಗಿರುವಂತೆ ಇಂದಿರಾಗಾಂಧಿ ಬಯಸಿದ್ದರು. ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳನ್ನು ನೇಮಿಸುವಾಗ ಅನೇಕ ಗೌರವಾನ್ವಿತ ನ್ಯಾಯಮೂರ್ತಿಗಳನ್ನು ಪರಿಗಣಿಸಿರಲಿಲ್ಲ. ಯಾವುದೇ ನ್ಯಾಯಾಂಗ ತೀರ್ಪು ಕಾಂಗ್ರೆಸ್ ನಾಯಕರ ವಿರುದ್ಧ ಹೊರಬಿದ್ದರೆ ಅದನ್ನು ತಿರಸ್ಕರಿಸಲಾಗುತ್ತಿತ್ತು. ನಂತರ ನ್ಯಾಯಮೂರ್ತಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಯೋಚಿಸಲಾಗುತ್ತಿತ್ತು ಎಂದು ನರೇಂದ್ರಮೋದಿ ಹೇಳಿದ್ದಾರೆ.