- ಬಾಯ್ಸ್ ವರ್ಸಸ್ ಗರ್ಲ್ಸ್ ಮತ್ತು ಮಜಾ ಟಾಕೀಸ್: ಬರ್ತಿದೆ ಡಬಲ್ ಮಜಾ
- ಪ್ರತಿ ಎಪಿಸೋಡ್ ನಂತರ ಕೇಳುವ ಪ್ರಶ್ನೆಗೆ ಸರಿಯುತ್ತರ ನೀಡಿದ ಅದೃಷ್ಟಶಾಲಿಗೆ ಬಹುಮಾನ
ಗದಗ: ಜನಪ್ರಿಯ ಟಿವಿ ಚಾನೆಲ್ ಕಲರ್ಸ್ ಕನ್ನಡವು ಎರಡು ಹೊಸ ರಿಯಾಲಿಟಿ ಶೋಗಳನ್ನು ಶುರುಮಾಡುತ್ತಿದೆ. ‘ಬಾಯ್ಸ್ V/S ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆಬ್ರವರಿ 1ರಿಂದ ಪ್ರಸಾರ ಆರಂಭಿಸಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಏಳೂವರೆಗೆ ‘ಬಾಯ್ಸ್ V/S ಗರ್ಲ್ಸ್’ ಹಾಗೂ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ನಿಮ್ಮನ್ನು ರಂಜಿಸಲಿವೆ.
‘ಬಾಯ್ಸ್ V/S ಗರ್ಲ್ಸ್’:
ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಶುರುಮಾಡುತ್ತಿರುವ ‘ಬಾಯ್ಸ್ V/S
ಗರ್ಲ್ಸ್’ ಒಂದು ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ ಬಿದ್ದು ನೋಡುಗರ ಬಿಸಿ ಏರಿಸುವ ಆಟದ ಶೋ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಕನ್ನಡ ಕಿರುತೆರೆಗೆ ಹೊಸದೆನಿಸುವ ಥ್ರಿಲ್ ಅನ್ನು ಹೊತ್ತು ತರುತ್ತಿದೆ.
ಬಾಯ್ಸ್ ತಂಡವನ್ನು ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮುನ್ನಡೆಸಿದರೆ, ಹುಡುಗಿಯರ ಗುಂಪಿನ ನಾಯಕಿ ನಟಿ ಶುಭಾ ಪೂಂಜಾ. ಇನ್ನು ಸ್ಪರ್ಧಿಗಳ ಪಟ್ಟಿಯೂ ಅಷ್ಟೇ ರೋಚಕವಾಗಿದೆ. ಈಗಷ್ಟೇ ಬಿಗ್ ಬಾಸ್ ಗೆದ್ದಿರುವ ಹನುಮಂತ ಲಮಾಣಿ, ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುವಂಥ ಆಟವಾಡಿದ ಧನರಾಜ್ ಆಚಾರ್, ಐಶ್ವರ್ಯಾ ಸಿಂಧೋಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಮತ್ತು ರಜತ್ ಕೂಡ ಇಲ್ಲಿ ನಿಮಗೆ ಸಿಗುತ್ತಾರೆ. ಜೊತೆಗೆ ಕಿರುತೆರೆಯ ಜನಪ್ರಿಯ ಮುಖಗಳಾದ ಪ್ರಶಾಂತ್, ಮಂಜು ಪಾವಗಡ, ನಿವೇದಿತಾ ಗೌಡ, ಸೂರಜ್, ವಿಶ್ವಾಸ್, ಸ್ನೇಹಿತ್, ವಿವೇಕ್ ಸಿಂಹ, ರಕ್ಷಿತ್, ಚಂದನ, ರಮ್ಯ, ಪ್ರಿಯಾ ಸವಡಿ, ಸ್ಪಂದನಾ ಮತ್ತು ಐಶ್ವರ್ಯಾ ವಿನಯ್ ಕೂಡ ಆಟಕ್ಕೆ ಕಿಚ್ಚು ಹಚ್ಚಲಿದ್ದಾರೆ. ಈ ಪಟ್ಟಿಯನ್ನೊಮ್ಮೆ ನೋಡಿದರೂ ಸಾಕು, ಆಟದ ಬಿಸಿ ಎಷ್ಟಿರುತ್ತೆ ಎಂಬುದನ್ನು ಊಹಿಸಬಹುದು.
ಶೋನ ಉದ್ದಕ್ಕೂ ಸ್ಪರ್ಧಿಗಳಿಗೆ ರೋಚಕ ಸವಾಲುಗಳಿರುತ್ತವೆ. ಹುಡುಗ ಹುಡುಗಿಯರು ತಮ್ಮ ಚಾಕಚಕ್ಯತೆ, ಸೃಜನಶೀಲತೆ ಮತ್ತು ಒಟ್ಟಾಗಿ ಆಡುವ ಮನೋಭಾವದಿಂದ ಈ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗೇಮುಗಳ ಜೊತೆಗೆ ನೃತ್ಯ ಸೇರಿದಂತೆ ಉಳಿದ ಟಾಸ್ಕುಗಳೂ ಇಲ್ಲಿರುತ್ತವೆ.
ಇವೆಲ್ಲದರ ಜೊತೆಗೆ ಹಳ್ಳಿ ಸೆಟಪ್, ಕಾಲೇಜ್ ಸೆಟಪ್ ನಂಥ ಮೋಜಿನ ಥೀಮುಗಳೂ ನಿಮ್ಮನ್ನು ಈ ಶೋನಲ್ಲಿ ರಂಜಿಸಲಿವೆ. ಚುರುಕು ಬುದ್ಧಿ ಹಾಗೂ ದೈಹಿಕ ಶಕ್ತಿಗಳೆರಡನ್ನೂ ಒಟ್ಟಿಗೆ ಪರೀಕ್ಷೆಗೊಳಪಡಿಸುವ ‘ಬಾಯ್ಸ್ V/S
ಗರ್ಲ್ಸ್’ ನ ಪ್ರತಿ ಸಂಚಿಕೆಯನ್ನೂ ವೀಕ್ಷಕರನ್ನು ತುದಿಗಾಲಲ್ಲಿ ಕೂರಿಸಲು ತಕ್ಕಂತೆ ರೂಪಿಸಲಾಗಿದೆ.
‘ಬಾಯ್ಸ್ V/S
ಗರ್ಲ್ಸ್’ ಶೋನ ನಿರೂಪಣೆಯ ಹೊಣೆ ಹೊತ್ತಿರುವುದು ಚೈತನ್ಯದ ಚಿಲುಮೆ ಅನುಪಮಾ ಗೌಡ. ವಿನೂತನ ಫಾರ್ಮ್ಯಾಟ್ ಮತ್ತು ವಿಭಿನ್ನ ಸವಾಲುಗಳಿಂದ ಸಿದ್ಧಗೊಂಡಿರುವ ‘ಬಾಯ್ಸ್ V/S
ಗರ್ಲ್ಸ್’ ನೋಡಲು ಮರೆಯಬೇಡಿ.
‘ಮಜಾ ಟಾಕೀಸ್’ :
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಈಗಾಗಲೇ ಮೂರು ಯಶಸ್ವೀ ಸೀಸನ್ನುಗಳನ್ನು ಮುಗಿಸಿರುವ ‘ಮಜಾ ಟಾಕೀಸ್’ ಇದೀಗ ಮತ್ತೊಂದು ಹೊಸ ಸೀಸನ್ ಗೆ ತಯಾರಾಗಿದೆ. ಎಲ್ಲ ವಯಸ್ಸಿನ ವೀಕ್ಷಕರನ್ನೂ ಮರುಳು ಮಾಡುವ ಮಾತುಗಾರ ಸೃಜನ್ ಈ ಹೊಸ ಸೀಸನ್ನಿಗೆ ಹಲವು ಹೊಸ ಸಂಗತಿಗಳನ್ನು ಸೇರಿಸಿರುವುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಮಜಾ ಮನೆಗೆ ಈ ಸಲ ಹೊಸ ಅತಿಥಿಗಳ ದಂಡೇ ಬಂದಿಳಿದಿದೆ. ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವ ನಿರ್ದೇಶಕ ಯೋಗರಾಜ ಭಟ್ರು ತಮ್ಮದೇ ಶೈಲಿಯ ಹುಡುಗಾಟಿಕೆಯನ್ನು ತಂದಿದ್ದಾರೆ. ಮಜಾ ಟಾಕೀಸಿನ ಹಳೇ ಹುಲಿಗಳಾದ ಕುರಿ ಪ್ರತಾಪ್ ಮತ್ತು ವಿಶ್ವ ತಮ್ಮ ಎಂದಿನ ತಮಾಷೆ ಮಾತುಗಳೊಂದಿಗೆ ತಯಾರಾಗಿದ್ದಾರೆ. ಅವರ ಪಂಚ್ ತುಂಬಿದ ಡೈಲಾಗುಗಳು ಮತ್ತು ಆಂಗಿಕ ಅಭಿನಯ ನಿಮ್ಮನ್ನು ಎಂದೂ ನಿರಾಸೆಗೊಳಿಸುವುದಿಲ್ಲ.
ಈ ಸಲದ ಮಜಾ ಟಾಕೀಸಿನಲ್ಲಿ ಹಲವು ಹೊಸ ಪಾತ್ರಗಳು ನಿಮ್ಮನ್ನು ಎದುರಾಗಲಿವೆ. ತಲೆ ತಿನ್ನುವ ಸೆಕ್ಯುರಿಟಿ ಗಾರ್ಡ್ ಆಗಿ ತುಕಾಲಿ ಸಂತೋಷ್, ವೈರಲ್ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿ ಪಿಕೆ ನಿಮ್ಮನ್ನು ರಂಜಿಸಿದರೆ, ಎದುರು ಮನೆಯ ಕಿರಿಕ್ ಅಜ್ಜಿಯಾಗಿ ಚಂದ್ರಪ್ರಭಾ ಎಲ್ಲರನ್ನೂ ಕಾಡಲಿದ್ದಾರೆ. ಕಲರ್ಸ್ ನ ಮತ್ತೊಂದು ಸುಪರ್ ಹಿಟ್ ಶೋ ‘ಗಿಚ್ಚಿಗಿಚ್ಚಿ ಗಿಲಿಗಿಲಿ’ಯ ಪ್ರತಿಭೆಗಳಾದ ಶಿವು, ವಿನೋದ್ ಗೊಬ್ಬರಗಾಲ, ಸೌಮ್ಯ ಮತ್ತು ಪ್ರಿಯಾಂಕಾ ಕಾಮತ್ ಎಡೆಬಿಡದೆ ನಗಿಸಲಿದ್ದಾರೆ.
ಇವರಷ್ಟೇ ಅಲ್ಲದೆ, ದೀಪಾ ಭಾಸ್ಕರ್, ಮಿಮಿಕ್ರಿ ಗೋಪಿ, ಶ್ರೀ ಭವ್ಯ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಕೂಡ ನಿಮ್ಮ ಖುಷಿಯನ್ನು ದುಪ್ಪಟ್ಟು ಮಾಡಲು ಕಾದಿದ್ದಾರೆ.
ಬರೀ ಮನೆಯೊಳಗಿನ ಪಾತ್ರಗಳಷ್ಟೇ ಅಲ್ಲ, ಈ ಸೀಸನ್ನಿನಲ್ಲಿ ಮಜಾ ಮನೆಗೆ ಬರಲಿರುವ ಅತಿಥಿಗಳ ಪಟ್ಟಿಯೂ ಹೊಸ ರೀತಿ ಇರಲಿದೆ. ಚಿತ್ರ ತಾರೆಗಳಷ್ಟೇ ಅಲ್ಲದೆ, ಈ ಸಲ ಮಜಾ ಮನೆಗೆ ವಿವಿಧ ಕ್ಷೇತ್ರಗಳ ಜನಪ್ರಿಯ ಸಾಧಕರು ಅತಿಥಿಗಳಾಗಿ ಬರಲಿದ್ದಾರೆ. ಕ್ರೀಡಾ ತಾರೆಗಳು, ರಾಜಕಾರಣಿ, ಉದ್ಯಮಿಗಳನ್ನು ಸಹ ನೀವಿಲ್ಲಿ ಎದುರು ನೋಡಬಹುದು. ಅವರ ಜೀವನಾನುಭವದ ಮಾತುಗಳನ್ನು ಕಚಗುಳಿಯಿಡುವ ಮಾತುಕತೆಯ ಮುಖಾಂತರ ಹೊರ ಹಾಕಲಿದ್ದಾರೆ ನಿರೂಪಕ ಸೃಜನ್ ಲೋಕೇಶ್.
ಪ್ರತಿ ಎಪಿಸೋಡ್ ನಂತರ ಕೇಳಲಾಗುವ
ಸರಳ ಪ್ರಶ್ನೆಗೆ ಸರಿಯುತ್ತರ ನೀಡಿದ ಅದೃಷ್ಟಶಾಲಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.