ನೂತನ ಕೈಗಾರಿಕಾ ನೀತಿ ಉದ್ಯಮ ವಲಯದ ಚೇತರಿಕೆಗೆ ಸಹಕಾರಿ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ನ.18 :      2019-2024ರ ನೂತನ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ದಿಮೆದಾರರಿಗೆ ವಿಶೇಷ ರಿಯಾತಿಗಳನ್ನು ಪ್ರಕಟಿಸಿ ಔದ್ಯಮ ವಲಯದ ಚೇತರಿಕೆಗೆ ಸಹಕಾರಿಯಾಗುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.  

ಎಫ್ಕೆಸಿಸಿಐ ಸಭಾಂಗಣದಲ್ಲಿ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಕೈಗಾರಿಕಾ ನೀತಿಯು ಸ್ನೇಹಪರವಾಗಿದ್ದು ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.  

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯು ರಾಜ್ಯದಲ್ಲಿ ಉದ್ಯಮ ವಲಯದ ಅಭ್ಯುದಯಕ್ಕಾಗಿ ನೀಡಿರುವ ಸಲಹೆಗಳನ್ನು ನೂತನ ಕೈಗಾರಿಕಾ ನೀತಿಯಲ್ಲಿ ಅಳವಡಿಸಲಾಗುವುದು. ಬೇರೆ ಬೇರೆ ರಾಜ್ಯಗಳಲ್ಲಿ ಕೈಗಾರಿಕೆಗಳ ಏಳಿಗೆಗೆ ಏನೇನು ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.  

ರಾಜ್ಯದಲ್ಲಿ ಮಹಿಳೆಯರಿಗೆ ಉದ್ಯಮ ಶೀಲತೆ ಬೆಳೆಸಲು ಹಾಗೂ ಸ್ವಾವಲಂಬಿ ಜೀವನ ಸಾಧಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. 1.6 ಲಕ್ಷ ಸ್ತ್ರೀ ಸಹಾಯ ಸಂಘಗಳಲ್ಲಿರುವ 22.30 ಲಕ್ಷ ಮಳೆಯರಿಗೆ ಹೆಚ್ಚು ಶಕ್ತಿ ತುಂಬಲಾಗಿದೆ. ಬ್ಯಾಂಕ್ ಮತ್ತು ಸಹಕಾರಿ ಸಂಘಗಳಿಂದ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಉದ್ಯಮ ನಡೆಸಲು ಸಹಾಯ ಮಾಡಲಾಗಿದೆ ಎಂದು ಅವರು ವಿವರಿಸಿದರು.