ನವದೆಹಲಿ , ಮೇ 11, ದೇಶದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಸ್ವಂತ ಸ್ಥಳಕ್ಕೆ ಕರೆದೊಯ್ಯಲು ರೈಲ್ವೆ ಇಲಾಖೆ ಶ್ರಮಿಕ ವಿಶೇಷ ಸೇವೆ ಒದಗಿಸಿದ್ದು, ಈ ರೈಲುಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ದೇಶದ ವಿವಿಧೆಡೆ ಸಿಲುಕಿದ್ದ ವಲಸೆ ಕಾರ್ಮಿಕರು ದುಡಿಮೆ ಇಲ್ಲದೇ, ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುವ ಸ್ಥಿತಿಯಲ್ಲಿದ್ದರು. ಈ ವಲಸೆ ಕಾರ್ಮಿಕರ ನೆರವಿಗಾಗಿ ಭಾರತೀಯ ರೈಲ್ವೆ ಇಲಾಖೆ ಉಚಿತವಾಗಿ ಶ್ರಮಿಕ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಿದೆ. ಈ ವೇಳೆ, ಹಲವು ನಿಯಮಗಳನ್ನು ವಿಧಿಸಲಾಗಿತ್ತು. ದೇಶದ ವಿವಿಧೆಡೆ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರು ತಮ್ಮ – ತಮ್ಮ ಊರುಗಳನ್ನು ತಲುಪಿದ್ದಾರೆ. ಈಗ ಕೇಂದ್ರ ಸರ್ಕಾರ ಈ ಶ್ರಮಿಕ ರೈಲುಗಳಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇಲ್ಲಿಯವರೆಗೆ ರೈಲು ಒಂದು ನಿಲ್ದಾಣದಿಂದ ಹೊರಟರೆ ಮತ್ತೆ ಅದು ತಲುಪಬೇಕಿದ್ದ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಇರುತ್ತಿತ್ತು. ಆದರೆ, ಈಗ ಮೂರು ಕಡೆ ನಿಲ್ಲಿಸಲು ಸೂಚಿಸಲಾಗಿದೆ. ಇದರೊಂದಿಗೆ ಒಂದು ಶ್ರಮಿಕ ರೈಲಿನಲ್ಲಿ ಸದ್ಯ 1200 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶವಿತ್ತು. ಈಗ 1700 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.