ಭುವನೇಶ್ವರ, ಆಗಸ್ಟ್ 11 ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ವಿರುದ್ಧ ತೀವ್ರ ರೀತಿಯ ಆರೋಪ ಮಾಡಿದ್ದಾರೆ. ನೆಹರೂ ಓರ್ವ ಕ್ರಿಮಿನಲ್ ಎಂದು ಟೀಕಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಎಸಗಿದ ಅನ್ಯಾಯಕ್ಕೆ ನೆಹರೂ ಅವರೇ ಕಾರಣ ಎಂದು ದೂಷಿಸಿದ್ದಾರೆ. ನೆಹರೂ ಅವರು ತಪ್ಪು ನಿರ್ಧಾರ ತೆಗೆದುಕೊಳ್ಳದಿದ್ದರೆ, ಕಾಶ್ಮೀರ ಸಂಪೂರ್ಣವಾಗಿ ಭಾರತದ ನಿಯಂತ್ರಣದಲ್ಲಿರುತ್ತಿತ್ತು ಎಂದು ಹೇಳಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಕಾಶ್ಮೀರದಿಂದ ಪಾಕಿಸ್ತಾನದ ಬುಡಕಟ್ಟು ಜನರನ್ನು ಸ್ಥಳಾಂತರಿಸುವಾಗ, ನೆಹರು ಕದನ ವಿರಾಮವನ್ನು ಘೋಷಿಸಿ ಮೊದಲ ಅಪರಾಧವನ್ನು ಎಸಗಿದ್ದರು. ಆದ್ದರಿಂದ, 1/3 ಭೂಪ್ರದೇಶ ( ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನದದ ನಿಯಂತ್ರಣದಲ್ಲಿ ಉಳಿಯಿತು. ನೆಹರೂ ಇನ್ನೂ ಕೆಲವು ದಿನಗಳವರೆಗೆ ಕದನ ವಿರಾಮ ಘೋಷಿಸದಿದ್ದರೆ, ಕಾಶ್ಮೀರ ನಮ್ಮದಾಗಿರುತ್ತಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ 370 ಜಾರಿಗೊಳಿಸುವ ಮೂಲಕ ನೆಹರೂ ಎರಡನೇ ಅಪರಾಧ ಎಸಗಿದ್ದರು. ಇದರಿಂದ ಒಂದೇ ದೇಶದಲ್ಲಿ ಎರಡು ಸಂವಿಧಾನ ಜಾರಿಯಲ್ಲಿರುವ ಪರಿಸ್ಥಿತಿ ನಿರ್ಮಾಣಗೊಂಡಿತು. ಇದು ದೇಶಕ್ಕೆ ಮಾಡಿದ ಅನ್ಯಾಯ ಮಾತ್ರವಲ್ಲ, ಅಪರಾಧವೂ ಆಗಿದೆ ಎಂದು ಶಿವರಾಜ್ ಸಿಂಗ್ ದೂರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರ ಮರು ವಿಭಜನೆ ವಿಧೇಯಕದ ಮೂಲಕ ಜಮ್ಮು -ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ವಿಧೇಯಕ ಸಂಬಂಧ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೆಹರೂ ಅವರನ್ನು ಟೀಕಿಸಿದ್ದರು.