ಬೆಂಗಳೂರು, ಜ 31-ಕಾವೇರಿ ನದಿ ಶುದ್ದೀಕರಣ ಮತ್ತು ಪುನಶ್ಚೇನ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ರಾಜ್ಯ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ನದಿ ಪುನಶ್ಚೇತನ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ಪಟ್ಟಿ ನೀಡುವಂತೆಯೂ ಸೂಚಿಸಿದೆ.
ಮಡಿಕೇರಿಯಿಂದ ತಲಕಾವೇರಿ, ನಾಪೋಕ್ಲುವಿನಿಂದ ಭಾಗಮಂಡಲ ನಡುವೆ ಮೇಲ್ಸೇತುವೆ ನಿರ್ಮಾಣ ಯೋಜನೆ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ಉದಾಸೀನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಜನವರಿ ೬ರಂದು ಕಾವೇರಿ ನದಿ ಕಲುಷಿತವಾಗುತ್ತಿದ್ದು, ಕಾವೇರಿ ನದಿಯಲ್ಲಿ ಕೊಳಚೆ ನೀರು ಸೇರ್ಡೆಯಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಆಗ ನ್ಯಾಯಪೀಠ, ಕಾವೇರಿ ನೀರು ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಸಲ್ಲಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಸೂಚನೆ ನೀಡಿತ್ತು.
ಈ ಕಾರ್ಯಯೋಜನೆಯಲ್ಲಿ ಹಲವು ಇಲಾಖೆಗಳ ಅಭಿಯಂತರರು ಕೆಲಸ ಮಾಡುತ್ತಿದ್ದಾರೆ ಎಂದು ನಿಗಮ ವಾದಿಸಿತ್ತು. ಹಾಗಾದರೆ ಸರ್ಕಾರ ನದಿ ಶುದ್ದೀಕರಣ ವಿಚಾರದಲ್ಲಿ ಯಾವ ಕ್ರಮ ಕೈಗೊಂಡಿದೆ ಎಂದು ಸಮಗ್ರ ಮಾಹಿತಿ ಕೊಡಿ ಎಂದು ಆದೇಶಿಸಿತ್ತು.