ಬೆಂಗಳೂರು, ಜ 9 ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸುತ್ತಿರುವುದಲ್ಲದೇ ಆಧಾರರಹಿತವಾಗಿ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಗಡೆ ಅವರನ್ನು ನಕ್ಸಲ್ ಎಂದು ನಿಂದಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪ್ರಗತಿಪರ ಸಾಹಿತಿಗಳು ಚಿಂತನೆ ನಡೆಸಿದ್ದಾರೆ.
ಈ ಹಿಂದೆ ಎಂ.ಪಿ.ಪ್ರಕಾಶ್ ಅವರು ಗೃಹ ಸಚಿವರಾಗಿದ್ದಾಗ ನಕ್ಸಲ್ ಪಟ್ಟಿ ಬಿಡುಗಡೆಯಾಗಿತ್ತಾದರೂ ಸರಿಯಾದ ಮಾಹಿತಿ ಆಧಾರವಿಲ್ಲದೇ ಕೆಲ ಬುದ್ಧಿಜೀವಿಗಳ ಹೆಸರನ್ನು ಪಟ್ಟಿಯಲ್ಲಿ ಗೃಹ ಇಲಾಖೆ ಸೇರಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪಟ್ಟಿ ಬಿಡುಗಡೆಯಾದ ಮರು ದಿನವೇ ಅದನ್ನು ಸರ್ಕಾರ ಹಿಂಪಡೆದಿತ್ತು. ಪಟ್ಟಿಯಲ್ಲಿ ಸಾಮಾಜಿಕ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಹೆಸರು ಇಲ್ಲದಿದ್ದರೂ ಇವರಿಗೆ ನಕ್ಸಲ್ ಎಂಬ ಹಣೆಪಟ್ಟವನ್ನು ಆಧಾರರಹಿತವಾಗಿ ಕಟ್ಟಿ ಅವರ ತೇಜೋವಧೆಗೆ ಕೆಲಪಟ್ಟಬದ್ಧ ಹಿತಾಸಕ್ತಿಗಳು ಪ್ರಯತ್ನಿಸಿದ್ದವು. ಅಲ್ಲದೇ ವರದಿಗಳು ಪ್ರಕಟವಾಗಿದ್ದವು. ತಮ್ಮ ಮೇಲಿನ ಸುಳ್ಳು ಆರೋಪಕ್ಕೆ ದೂರು ನೀಡಿ ಸುಮಾರು ಏಳು ವರ್ಷ ಪ್ರಕರಣ ನಡೆದು ವಿಠಲ್ ಹೆಗ್ಗಡೆ ಅವರ ತೇಜೋವಧೆ ಮಾಡಿದ್ದಕ್ಕಾಗಿ ಆರೋಪಿತರಿಗೆ ಜೈಲುಶಿಕ್ಷೆ ಹಾಗೂ ದಂಡವನ್ನು ನ್ಯಾಯಾಲಯ ವಿಧಿಸಿತ್ತು.
ವಿಠಲ್ ಅವರ ಮೇಲೆ ನಕ್ಸಲ್ ಹೋರಾಟವಾಗಲೀ ಬೆಂಬಲದ ಬಗ್ಗೆಯಾಗಲೀ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.
ಹೀಗಿದ್ದರೂ ಸಚಿವ ಸಿ.ಟಿ.ರವಿ ವಿಠಲ್ ಹೆಗ್ಗಡೆ ಅವರನ್ನು ನಕ್ಸಲ್ ಎನ್ನುತ್ತಿರುವುದು ಇದೀಗ ಸಾಹಿತ್ಯಾಸಕ್ತರ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಸಿ.ಟಿ.ರವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಇನ್ನು ಸಮ್ಮೇಳನಕ್ಕೆ ಫ್ಲೆಕ್ಸ್ ಬ್ಯಾನರ್ ಕಟೌಟ್ ಹಾಕದಂತೆ ಸಂಭ್ರಮಾಚರಣೆ ಮಾಡದಂತೆ ಜಿಲ್ಲಾಡಳಿತ ಆದೇಶಿಸಿದೆ.
ಶೃಂಗೇರಿಯಲ್ಲಿ ನಾಳೆಯಿಂದ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವು ನಡೆಯಗೊಡದಂತೆ ಮಾಡಲು ಯತ್ನಿಸುತ್ತಿರುವ ರಾಜ್ಯ ಸರಕಾರದ ನಡೆ ಖಂಡನೀಯ. ರಾಜ್ಯ ಸಂಸ್ಕೃತಿ ಮಂತ್ರಿಗಳು, ಎಲ್ಲೆಲ್ಲೂ ಪೊಲೀಸರು ಹಾಗೂ ಶೃಂಗೇರಿ ನಗರಸಭೆ, ವಿವಿಧ ರೀತಿಯಲ್ಲಿ ಸಮ್ಮೇಳನಕ್ಕೆ ಅಡೆತಡೆ ಉಂಟು ಮಾಡುತ್ತಿದೆ ಎಂದು ತಿಳಿದು ಆಘಾತವಾಗಿದೆ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.
ಇದು, ಸಾಂಸ್ಕೃತಿಕ ಸ್ವಾಯತ್ತತೆಯ ಮೇಲೆ ಸರಕಾರ ನಡೆಸಿರುವ ನೇರ ಹಲ್ಲೆಯಾಗಿದೆ. ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಸರಕಾರದ ಈ ನಡೆಯನ್ನು ಪ್ರತಿಭಟಿಸಬೇಕು ಹಾಗೂ ಸಂಸ್ಥೆಯ ಸ್ವಾಯತ್ತತೆಯನ್ನು ಸರಕಾರವು ಗೌರವಿಸುವ ತನಕ ಸರಕಾರದ ಸಹಾಯಧನವನ್ನು ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕನ್ನಡ ಜನತೆ ತಾನೇ ಮುಂದೆ ನಿಂತು ಸಮ್ಮೇಳನವನ್ನು ಯಶಸ್ವಿಯಾಗಿಸಲು ಹೊರಟಿರುವುದು ಹಾಗೂ ಹಣ ಮತ್ತು ಇತರೆ ಸಹಾಯ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಬ್ಬ ಸಾಮಾನ್ಯ ಸಾಂಸ್ಕೃತಿಕ ಕಾರ್ಯಕರ್ತನಾದ ನಾನು ಈ ಕೆಲಸದಲ್ಲಿ ಹೆಮ್ಮೆಯಿಂದ ಕೈಜೋಡಿಸಬಯಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.