ಅ.3ರಿಂದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

ಉಗರಗೋಳ 01: ಸಪ್ತಗುಡ್ಡ, ಸಪ್ತಕೋಳ್ಳಗಳ ನಡುವೆ ನೇಲೆ ನಿಂತ ಏಳುಕೊಳ್ಳದ ನಾಡು, ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಅ.3ರಂದು ಸಂಜೆ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಘಟ್ಟಸ್ಥಾಪನೆ ಮೂಲಕ ಉತ್ಸವ ಆರಂಭಗೊಳ್ಳಲಿದ್ದು, ಒಂಭತ್ತು ದಿನಗಳ ಕಾಲ ಯಲ್ಲಮ್ಮನಗುಡ್ಡದ ಸಂಭ್ರಮದಲ್ಲಿ ಮಿಂದೇಳಲಿದೆ. 

ನವರಾತ್ರಿ ಪ್ರಯುಕ್ತ ಗುಡ್ಡದಲ್ಲಿನ ಅರ್ಚಕರು ತಮ್ಮ ಮನೆಗಳನ್ನು ಮತ್ತು ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳಿಗೆ ಸುಣ್ಣ-ಬಣ್ಣ ಬಳಿದು ಅಲಂಕರಿಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿಯವರು ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದಾರೆ. ಒಟ್ಟಾರೆಯಾಗಿ ಇಡೀ ಗುಡ್ಡದ ಪರಿಸರ ಸಿಂಗಾರಗೊಂಡು ಕಂಗೊಳಿಸುತ್ತಿದೆ. 

ನವರಾತ್ರಿಯಲ್ಲಿ ಯಲ್ಲಮ್ಮನಗುಡ್ಡ ಭಕ್ತರಿಂದ ತುಂಬಿ ತುಳುಕುತ್ತದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಗೋವಾ, ಕೇರಳ, ಆಂಧ್ರ​‍್ರದೇಶ ಮತ್ತಿತರ ರಾಜ್ಯಗಳಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಸಾಗರ ಹರಿದುಬರುತ್ತದೆ. 5, 7 ಮತ್ತು 9ನೇ ಘಟ್ಟಗಳಂದು ನಾವು ಕಣ್ಣು ಹಾಯಿಸಿದಷ್ಟು ದೂರದವರೆಗೂ ಜನಜಾತ್ರೆಯೇ ನೆರೆದಿರುತ್ತದೆ. 

ವರುಣನ ಅವಕೃಪೆಯಿಂದ ಕಳೆದ ವರ್ಷ ರಾಜ್ಯದಲ್ಲಿ ಬರ ಆವರಿಸಿತ್ತು. ಇದು ನವರಾತ್ರಿ ಉತ್ಸವದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಸಲ ಮಳೆರಾಯ ಎಲ್ಲರ ಮೊಗದಲ್ಲೂ ಸಂತಸ ತಂದಿದ್ದಾನೆ. ಶಕ್ತಿ ಯೋಜನೆಯೂ ಜಾರಿಗೆ ಬಂದಿದೆ. ಇದರಿಂದಾಗಿ ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. 20 ಲಕ್ಷಕ್ಕೂ ಅಧಿಕ ಭಕ್ತರು ಸೇರಬಹುದು. ಅದರಲ್ಲೂ ಮಹಿಳೆಯರು ಹೆಚ್ಚಿರಲಿದ್ದಾರೆ ಎಂದು ಅಧಿಕಾರಿಗಳು ನೀರೀಕ್ಷೆಯಲ್ಲಿದ್ದಾರೆ. 

ನವರಾತ್ರಿಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ, ವಿಶೇಷ ಅಲಂಕಾರ ನೆರವೇರುತ್ತದೆ. ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಮುಂಭಾಗದಲ್ಲಿ ನಿಗದಿತ ಸ್ಥಳದಲ್ಲಿ ದೀಪ ಅಳವಡಿಸಲಾಗುತ್ತದೆ. ಈ ಅವಧಿಯಲ್ಲಿ ಗುಡ್ಡಕ್ಕೆ ಬರುವ ಪ್ರತಿ ಭಕ್ತರೂ ಅದಕ್ಕೆ ಎಣ್ಣೆ ಹಾಕಿ, ತಮ್ಮ ಬಾಳು ಈ ದೀಪದಂತೆ ಬೆಳಗುತಿರಲಿ ಎಂದು ಪ್ರಾರ್ಥಿಸುತ್ತಾರೆ. ಕಳೆದ ಬಾರಿ ನವರಾತ್ರಿಯಲ್ಲಿ 25ರಿಂದ 30 ಬ್ಯಾರೆಲ್ ಎಣ್ಣೆ ಸಂಗ್ರಹವಾಗಿತ್ತು. ಈ ಸಲ ಆ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. 

ಪ್ರತಿ ಚಟುವಟಿಕೆ ಮೇಲೂ ನಿಗಾ: ನವರಾತ್ರಿಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಅನುಕೂಲವಾಗಲಿ ಮತ್ತು ಕಳ್ಳತನ ಪ್ರಕರಣ ತಡೆಗಟ್ಟಲು ಸಹಾಯವಾಗಲೆಂದು ಆಯ್ದ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಚೈನ್ ಗೇಟ್, ದೇವಸ್ಥಾನದ  ಪ್ರಾಂಗಣ ಮತ್ತು ಪರಶುರಾಮ ದೇವಸ್ಥಾನದ ಬಳಿ 360 ಡಿಗ್ರಿ ರೂಟೇಟ್ ಮಾದರಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಇವು ಜನಸಂದಣಿ ಹೆಚ್ಚಿರುವ ಕಡೆ ತಿರುಗಿ, ದೃಶ್ಯಾವಳಿ ಸೆರೆಹಿಡಿಯಲಿವೆ. ಸಮರ​‍್ಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಹೆಸ್ಕಾಂಗೆ ಮನವಿ ಮಾಡಿಕೊಳ್ಳಲಾಗಿದೆ. ಒಂದುವೇಳೆ ವಿದ್ಯುತ್ ಕೈಕೊಟ್ಟರೂ ತೊಂದರೆಯಾಗದಿರಲೆಂದು ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 

‘ಇಡೀ ಗುಡ್ಡದಲ್ಲಿ 23 ಹೈಮಾಸ್ಟ್‌ ವಿದ್ಯುತ್ ದೀಪಗಳಿದ್ದು, ಸಮರ​‍್ಕ ಬೆಳಕಿನ ವ್ಯವಸ್ಥೆ ಮಾಡಿದ್ದೇವೆ. ಸುಲಭವಾಗಿ ದೇವಿ ದರ್ಶನ ಪಡೆಯಲು ಅನುಕೂಲವಾಗುವಂತೆ ಭಕ್ತರಿಗೆ ಸರದಿ ಸಾಲಿನ ವ್ಯವಸ್ಥೆ ಜೋತೆಗೆ ನೆರಳಿನ ವ್ಯವಸ್ಥೆ ಮಾಡುತ್ತೇವೆ. ಶುದ್ದ ಕುಡಿಯುವ ನೀರು, ಶೌಚಗೃಹ ಮತ್ತಿತರ ಮೂಲಸೌಕರ್ಯ ಕಲ್ಪಿಸುತ್ತೇವೆ’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

‘ಶಾಸಕರ ನಿರ್ದೇಶನದ ಮೇರೆಗೆ, ನವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. 50 ಮಂದಿ ಸಿಬ್ಬಂದಿಗೆ ಹೆಚ್ಚುವರಿ ಕರ್ತವ್ಯದ ಜವಾಬ್ದಾರಿ ವಹಿಸಲಾಗಿದೆ. ನಾನೂ ಮತ್ತು ಮೂವರು ಹಿರಿಯ ಅಧಿಕಾರಿಗಳು ಖುದ್ದಾಗಿ ಮೇಲ್ವಿಚಾರಣೆ ನಡೆಸಲಿದ್ದೇವೆ’ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ಹೇಳಿದರು. 

ಕನಿಷ್ಠ 50 ಬಸ್‌ಗಳ ವ್ಯವಸ್ಥೆ: ‘ನವರಾತ್ರಿ ಪ್ರಯುಕ್ತ ಬೆಳಗಾವಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಸೌಕರ್ಯ ಕಲ್ಪಿಸಿದ್ದೇವೆ. ಒಂಭತ್ತು ದಿನಗಳ ಅವಧಿಯಲ್ಲಿ ಬೆಳಗಾವಿ-ಯಲ್ಲಮ್ಮನಗುಡ್ಡ ಮಾರ್ಗದಲ್ಲಿ ಕನಿಷ್ಠ 50 ಬಸ್ ಕಾರ್ಯಾಚರಣೆ ನಡೆಸಲಿವೆ. ಭಕ್ತರ ಬೇಡಿಕೆ ಹೆಚ್ಚಿದಂತೆ ಹೆಚ್ಚುವರಿ ಬಸ್ ಬಿಡಲಾಗುವುದು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ತಿಳಿಸಿದರು. 

‘ನವರಾತ್ರಿಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳುತ್ತೇವೆ. ಸವದತ್ತಿ ಠಾಣೆ ಸಿಬ್ಬಂದಿ ಜತೆಗೆ, ಬೇರೆ ಠಾಣೆಗಳಿಂದಲೂ ಪೊಲೀಸರು ಮತ್ತು ಅಧಿಕಾರಿಗಳನ್ನು ನಿಯೋಜಿಸುತ್ತೇವೆ. ಎರಡು ಡಿಎಆರ್ ತುಕಡಿಗಳೂ ಕಾರ್ಯನಿರ್ವಹಿಸಲಿವೆ. ಈಗಾಗಲೇ ಹಲವು ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ದೇವಸ್ಥಾನ ಅಧಿಕಾರಿಗಳ ಮೂಲಕ ಇನ್ನಷ್ಟು ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ವಹಿಸುತ್ತೇವೆ’ ಎಂದು ಸವದತ್ತಿ ಸಿಪಿಐ ಧರ್ಮಾಕರ ಧರ್ಮಟ್ಟಿ ಹೇಳಿದರು. 

ಅ.12ರಂದು ವಿಜಯದಶಮಿಯಂದು ಯಲ್ಲಮ್ಮನಗುಡ್ಡ-ಉಗರಗೋಳ ಮಾರ್ಗದಲ್ಲಿರುವ ಬನ್ನಿ ಮಹಾಂಕಾಳೇಶ್ವರಿ ದೇವಸ್ಥಾನದ ಬಳಿ ಬನ್ನಿ ಮುಡಿಯುವುದರೊಂದಿಗೆ ಉತ್ಸವಕ್ಕೆ ತೆರೆಬೀಳಲಿದೆ.