ಬೈಲಹೊಂಗಲ 19- ಹರಿತವಾದ ಕತ್ತಿ ಹಿಡಿದ ಪೂಜೇರಿಯು ಭಕ್ತರ ಹೊಟ್ಟೆಗೆ ಎರಡು ಏಟು ಹಾಕುತ್ತಾನೆ.
ಆಗ ಭಕ್ತರ ಜೈಕಾರ ಮುಗಿಲು ಮುಟ್ಟುತ್ತದೆ. ಕತ್ತಿಯಿಂದ ಏಟು ಹಾಕಿಸಿಕೊಂಡರೂ ಭಕ್ತರಿಗೆ
ಯಾವ ಗಾಯವೂ ಆಗಲಾರದು.
ಇದು ಯಾವ ಚಲನಚಿತ್ರದ
ಸನ್ನಿವೇಶವೂ ಅಲ್ಲ. ಶುಕ್ರವಾರ ಸಮೀಪದ ಮೊಹರೆ ಗ್ರಾಮದ ಬಸವೇಶ್ವರ ದೇವಸ್ಥಾನದ
ಎದುರು ನವರಾತ್ರಿ ಅಂಗವಾಗಿ ನಡೆದ ಅಲಗು ಹಾಯುವ
ಕಾರ್ಯಕ್ರಮವಾಗಿದೆ. ಪ್ರತಿವರ್ಷದಂತೆ ದಸರಾ ಹಬ್ಬದಲ್ಲಿ ಲಕ್ಷ್ಮೀ
ದೇವಸ್ಥಾನದ ಮೂಲಕ ಭಕ್ತರು ಪಲ್ಲಕ್ಕಿಯೊಂದಿಗೆ
ಬಂದು ಸೇರಿದ ಭಕ್ತಾದಿಗಳ ಮುಂದೆ ಅಲಗು ಹಾಕಿಸಿಕೊಳ್ಳಲಾಗುತ್ತದೆ.
ಅಲಗು ಹಾಯುವದೆಂದರೆ ಕತ್ತಿ
ಹಿಡಿದು ನಿಂತ ಪೂಜೇರಿಗಳಾದ ಗಂಗಪ್ಪ
ತಳವಾರ, ಬೋರಪ್ಪ ತಳವಾರ, ಯಲ್ಲಪ್ಪ ತಳವಾರ, ನಿಂಗಪ್ಪ ತಳವಾರ ಮೊದಲಾದವರು 5 ದಿನದಿಂದ ಉಪವಾಸ ಇರುವ ನೂರಾರು ಭಕ್ತರ
ಮೇಲೆ ಭಂಡಾರ ಎರಚಿ ಒಬ್ಬರಾದ ಮೇಲೆ
ಒಬ್ಬರಿಗೆ ಕತ್ತಿಯಿಂದ ಹೊಡೆಯುತ್ತಾರೆ. ಕತ್ತಿ ಅಲಗಿನಿಂದ ಹೊಡೆಸಿಕೊಂಡರೂ ಯಾವುದೇ ಗಾಯವಾಗದಿರುವುದು ವಿಶೇಷವಾಗಿದೆ. ಇದು ಭಕ್ತಿಯ ಪರಾಕಾಷ್ಠೆ
ಎನ್ನಬಹುದು.
ಚಿಕ್ಕಮಕ್ಕಳು, ಯವಸ್ಕರು, ವೃದ್ಧರು ಸಹ ಅಲಗು ಹಾಕಸಿಕೊಳ್ಳುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ನಾಲಿಗೆ,ಕುತ್ತಿಗೆ, ಕತ್ತು, ಹೊಟ್ಟೆ, ತೊಡೆಗಳ ಮೇಲೆ ಕತ್ತಿಯಿಂದ ಅಲಗು
ಹಾಕಸಿಕೊಂಡು ಭಕ್ತಿಯಿಂದ ನಮಿಸಿದರು. ಇಂಥ ನೂರಾರು ಭಕ್ತರು
ಗ್ರಾಮದಲ್ಲಿರುವುದು ಕಂಡು ಬರುತ್ತದೆ. ಕೊನೆಗೆ
ದೇವಸ್ಥಾನದ ಎದುರು ನಿಂತ ಐದು ಕಬ್ಬುಗಳನ್ನು
ಅದೇ ಕತ್ತಿಯಿಂದ ಕತ್ತರಿಸುವದರೊಂದಿಗೆ ಕಾರ್ಯಕ್ರಮ
ಮುಕ್ತಾಯಗೊಳ್ಳುತ್ತದೆ.