ಬೆಂಗಳೂರು, ಮಾ 30, ಕೊರೋನಾ ಸಂಬಂಧಿತ ಸೇವೆಗಳಿಗೆ 500 ಓಲಾ ವಾಹನಗಳನ್ನು ಬಳಕೆ ಮಾಡಿಕೊಳ್ಳುವ ಮುನ್ನ ಚಾಲಕ ಸಮುದಾಯದಾಯಕ್ಕೆ ಸೂಕ್ತ ವೈದ್ಯಕೀಯ ವಿಮೆ, ರಕ್ಷಣಾ ಪರಿಕರಗಳನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.ಏಪ್ರಿಲ್ 14ರ ವರೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಚಾಲಕ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಕೊರೋನಾ ವೈರಸ್ ನಿಯಂತ್ರಣ ಸಮರದಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಮತ್ತು ಮಿಲಿಟರಿ, ಅರೆಮಿಲಿಟರಿ ಪಡೆ ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಇವರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ಚಾಲಕರಿಗೆ ವಿಮಾ ಸೌಲಭ್ಯ ಕಲ್ಪಿಸಿಲ್ಲ. ಈ ತಾರತಮ್ಯ ಧೋರಣೆ ಖಂಡನೀಯ ಎಂದಿದ್ದಾರೆ.ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕೊರೋನಾ ಸಂಬಂಧಿತ ಸೇವೆಗೆ ಸಂಸ್ಥೆಯ 500 ವಾಹನಗಳನ್ನು ನೀಡಲು ಓಲಾ ಸಂಸ್ಥೆ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಇದು ಕೂಡ ಏಕಪಕ್ಷೀಯ ತೀರ್ಮಾನವಾಗಿದ್ದು, ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲಾ ಚಾಲಕ ಒಕ್ಕೂಟಗಳ ಮುಖಂಡರ ಜತೆ ಸರ್ಕಾರ ಚರ್ಚೆ ನಡೆಸಬೇಕಿತ್ತು. ಚಾಲಕರನ್ನು ಮೂರನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುವ ಸರ್ಕಾರದ ಧೋರಣೆ ಖಂಡನೀಯ ಎಂದಿದ್ದಾರೆ. ಒಬ್ಬ ಚಾಲಕರಿಗೆ ಕೊರೋನಾ ಸೊಂಕು ಹಬ್ಬಿದರೆ ಅವರೊಂದಿಗೆ ಹಲವರಿಗೆ ಸೋಂಕು ತಗಲುತ್ತದೆ. ಅವರ ಕುಟುಂಬ ಸದಸ್ಯರಿಗೂ ಆಪತ್ತು ತಪ್ಪಿದ್ದಲ್ಲ. ಹೀಗಾಗಿ ಸರ್ಕಾರ ವಿವೇಚನೆಯಿಂದ ನಡೆದುಕೊಳ್ಳಬೇಕು. ಚಾಲಕರೊಂದಿಗೆ ಪೊಲೀಸರು ವಿವೇಕದಿಂದ ವರ್ತಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.