ಹೊಸಬಂಡಿ ಹರ್ಲಾಪೂರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

National Science Day Celebration at Hosbandi Harlapura

ಹೊಸಬಂಡಿ ಹರ್ಲಾಪೂರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕೊಪ್ಪಳ 01: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಹಾಗೂ ಜಿಲ್ಲಾ ಎನ್‌.ಆರ್‌.ಡಿ.ಎಮ್‌.ಎಸ್‌. ಕೇಂದ್ರ, ಜಿಲ್ಲಾ ಪಂಚಾಯತ್ ಕೊಪ್ಪಳ ರವರ ಸಹಯೋಗದೊಂದಿಗೆ "ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವಿನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರ ಸಬಲೀಕರಣ" ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಕೊಪ್ಪಳ ತಾಲೂಕಿನ ಹೊಸಬಂಡಿ ಹರ್ಲಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.  

 ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರಾದ ರಾಘವೇಂದ್ರ ಇಲ್ಲೂರು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾರಂಭದಲ್ಲಿ ಪ್ರಾಸ್ತವಿಕ ನುಡಿಯನ್ನು ಜಿಲ್ಲಾ ಎನ್‌.ಆರ್‌.ಡಿ.ಎಮ್‌.ಎಸ್‌. ಕೇಂದ್ರದ ಯೋಜನಾ ಸಂಯೋಜಕರು ಪಿ.ಗುರುಸ್ವಾಮಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉದ್ದೇಶಗಳು ಹಾಗೂ ನಡೆದು ಬಂದ ದಾರಿಯ ಬಗ್ಗೆ ತಿಳಿಸಿಕೊಟ್ಟರು.  

ಹುಲಿಗಿ ಗ್ರಾಮದ ತುಂಗಭದ್ರಾ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾದ ರಾಜೀವ್ ಅಂಗಡಿ ಅವರು, ದೈನಂದಿನ ಚಟುವಟಿಕೆಯಲ್ಲಿ ವಿಜ್ಞಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಗವಿಸಿದ್ದೇಶ್ವರ ಸ್ವಾಮಿ ಬೆಣಕಲಮಠ ಅವರು, ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ವೈಜ್ಞಾನಿಕವಾಗಿ ಅಲೋಚನ ಮಾಡುವುದು ಮತ್ತು ಮೂಢನಂಬಿಕೆಗಳಿಗೆ ಒತ್ತುಕೊಡದೇ ವೈಜ್ಞಾನಿಕ ಮನೋಭಾವನೆ ಬೆಳಿಸಿಕೊಳ್ಳಲು ತಿಳಿಸಿಕೊಟ್ಟರು. ಗೀಣಿಗೇರಾ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸದಾನಂದ ಅವರು, ಸರ್‌.ಸಿ.ವಿ. ರಾಮನ್ ರವರ ಜೀವನದ ಬಗ್ಗೆ ಮತ್ತು ಅವರ “ರಾಮನ್ ಪರಿಣಾಮ” ದ ಅವಿಷ್ಕಾರದ ಬಗ್ಗೆ ಹಾಗೂ ವಿಜ್ಞಾನದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.  

ಕಾರ್ಯಕ್ರಮದಲ್ಲಿ ಹೊಸಬಂಡಿಹರ್ಲಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಸುಂಕದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಹಶಿಕ್ಷಕ ಡಿ.ಸೋಮಪ್ಪ ಅವರು ಸ್ವಾಗತಿಸಿದರು, ದೈಹಿಕ ಶಿಕ್ಷಕಿ ಸುಮಲತಾ ಅವರು ವಂದಿಸಿದರು. ಶಾಲಾ ಮಕ್ಕಳಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.